19ನೇ ವಯಸ್ಸಿನಲ್ಲೇ ಪಾಕ್ ದಾಂಡಿಗನ ವಿಶ್ವ ದಾಖಲೆ ಮುರಿದ ಲುವಾನ್-ಡ್ರೆ
Zimbabwe vs South Africa: ಝಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಲುವಾನ್-ಡ್ರೆ ಪ್ರಿಟೋರಿಯಸ್ 153 ರನ್ಗಳ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಮತ್ತೊಂದೆಡೆ ಕಾರ್ಬಿನ್ ಬಾಷ್ ಅಜೇಯ 100 ರನ್ ಕಲೆಹಾಕಿದರು. ಈ ಮೂಲಕ ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡವು 9 ವಿಕೆಟ್ ಕಳೆದುಕೊಂಡು 418 ರನ್ ಕಲೆಹಾಕಿದೆ.
Updated on: Jun 29, 2025 | 11:55 AM

ಸೌತ್ ಆಫ್ರಿಕಾ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಯುವ ದಾಂಡಿಗ ಲುವಾನ್-ಡ್ರೆ ಪ್ರಿಟೋರಿಯಸ್ (Lhuan-dre Pretorius) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 49 ವರ್ಷಗಳ ಹಿಂದೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಬರೆದ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಝಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 55 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಲುವಾನ್-ಡ್ರೆ ಪ್ರಿಟೋರಿಯಸ್ ಕಣಕ್ಕಿಳಿದಿದ್ದರು.

ಚೊಚ್ಚಲ ಟೆಸ್ಟ್ ಇನಿಂಗ್ಸ್ನಲ್ಲೇ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಲುವಾನ್-ಡ್ರೆ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲದೆ ಚೊಚ್ಚಲ ಪಂದ್ಯದಲ್ಲೇ 112 ಎಸೆತಗಳಲ್ಲಿ ಶತಕ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದರು. ಶತಕದ ಬಳಿಕ ಆರ್ಭಟ ಮುಂದುವರೆಸಿದ ಲುವಾನ್-ಡ್ರೆ ಪ್ರಿಟೋರಿಯಸ್ 153 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಅದು ಕೂಡ ಕೇವಲ 160 ಎಸೆತಗಳಲ್ಲಿ ಎಂಬುದು ವಿಶೇಷ.

4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 153 ರನ್ ಬಾರಿಸುವ ಮೂಲಕ ಲುವಾನ್-ಡ್ರೆ ಪ್ರಿಟೋರಿಯಸ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 150+ ಸ್ಕೋರ್ಗಳಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಹೆಸರಿನಲ್ಲಿತ್ತು.

1976 ರಲ್ಲಿ ಲಾಹೋರ್ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಜಾವೇದ್ ಮಿಯಾಂದಾದ್ 163 ರನ್ ಬಾರಿಸಿದ್ದರು. ಈ ವೇಳೆ ಅವರ ವಯಸ್ಸು 19 ವರ್ಷ, 119 ದಿನಗಳು. ಇದೀಗ 49 ವರ್ಷಗಳ ಈ ವಿಶ್ವ ದಾಖಲೆಯನ್ನು ಮುರಿಯುವಲ್ಲಿ ಲುವಾನ್-ಡ್ರೆ ಪ್ರಿಟೋರಿಯಸ್ ಯಶಸ್ವಿಯಾಗಿದ್ದಾರೆ.

ಝಿಂಬಾಬ್ವೆ ವಿರುದ್ಧ 153 ರನ್ ಬಾರಿಸಿರುವ ಲುವಾನ್-ಡ್ರೆ ಪ್ರಿಟೋರಿಯಸ್ ವಯಸ್ಸು 19 ವರ್ಷ, 93 ದಿನಗಳು. ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 150+ ಸ್ಕೋರ್ಗಳಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಲುವಾನ್-ಡ್ರೆ ಪ್ರಿಟೋರಿಯಸ್ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಪಂದ್ಯಲ್ಲೇ ಹೊಸ ಇತಿಹಾಸ ನಿರ್ಮಿಸುವಲ್ಲಿ ಯುವ ಎಡಗೈ ದಾಂಡಿಗ ಯಶಸ್ವಿಯಾಗಿದ್ದಾರೆ.









