Punjab
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಪಂಜಾಬ್ ಕಿಂಗ್ಸ್ ತಂಡದ ವೇಗಿ ಲಾಕಿ ಫರ್ಗುಸನ್ ಇಡೀ ಸೀಸನ್‌ನಿಂದ ಹೊರಬಿದಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಲಾಕಿ ಫರ್ಗುಸನ್ ಅವರ ಗಾಯವು ಗಂಭೀರವಾಗಿದ್ದು, ಅವರು ಆಡುವುದು ಅಸಾಧ್ಯವಾಗಿದೆ. ಅದಕ್ಕಾಗಿಯೇ ಅವರು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ ಎಂದು ವರದಿ ಮಾಡಿವೆ.
ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಗಾಯಗೊಂಡಿರುವ ಫರ್ಗುಸನ್ ಯಾವಾಗ ತಂಡಕ್ಕೆ ಮರಳುತ್ತಾರೆ ಎಂದು ಹೇಳುವುದು ಕಷ್ಟ. ಹೀಗಾಗಿ ಅವರು ಈ ಟೂರ್ನಿಯಲ್ಲಿ ಆಡುವುದು ಬಹುತೇಕ ಅಸಾಧ್ಯ ಎಂದು ಮಾಹಿತಿ ನೀಡಿದ್ದಾರೆ.
ಈ ಸೀಸನ್ನಲ್ಲಿ ಪಂಜಾಬ್ ಪರ ನಾಲ್ಕು ಪಂದ್ಯಗಳನ್ನಾಡಿರುವ ಲಾಕಿ ಫರ್ಗುಸನ್ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ತಂಡದ ಬೌಲಿಂಗ್ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಫರ್ಗುಸನ್ ಅವರ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಇದಲ್ಲದೆ ಅವರಿಗೆ ಸರಿಸಾಟಿಯಾದ ಬದಲಿ ಆಟಗಾರ ತಂಡದಲ್ಲಿ ಇಲ್ಲದೆ ಇರುವುದು ಪಂಜಾಬ್ ತಂಡವನ್ನು ಚಿಂತೆಗೀಡುಮಾಡಿದೆ.
ಲಾಕಿ ಫರ್ಗುಸನ್ ಅವರ ಬದಲಿಯಾಗಿ ಅಫ್ಘಾನಿಸ್ತಾನದ ಆಲ್‌ರೌಂಡರ್ ಅಜ್ಮತುಲ್ಲಾ ಉಮರ್ಜೈ ತಂಡದಲ್ಲಿ ಇದ್ದಾರಾದರೂ ಅವರು ಲಾಕಿ ಫರ್ಗುಸನ್ ಅವರಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಫರ್ಗುಸನ್ ಅವರ ಬದಲಿಯಾಗಿ ಕನ್ನಡಿಗ ವಿಜಯಕುಮಾರ್ ವೈಶಾಕ್ ತಂಡಕ್ಕೆ ಆಯ್ಕೆಯಾಗಬಹುದು.