Karun Nair: ಬರೋಬ್ಬರಿ 7 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕನ್ನಡಿಗ..!
IPL 2025 DC vs MI: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 29ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 205 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19 ಓವರ್ಗಳಲ್ಲಿ 193 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಪಡೆ 12 ರನ್ಗಳ ಗೆಲುವು ದಾಖಲಿಸಿದೆ.
Updated on: Apr 14, 2025 | 10:24 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 29ನೇ ಪಂದ್ಯದ ಮೂಲಕ ಕರುಣ್ ನಾಯರ್ (Karun Nair) ಐಪಿಎಲ್ಗೆ ಕಂಬ್ಯಾಕ್ ಮಾಡಿದ್ದಾರೆ. ಈ ಕಂಬ್ಯಾಕ್ ಪಂದ್ಯದಲ್ಲೇ ಆಕರ್ಷಕ ಅರ್ಧಶತಕವನ್ನೂ ಸಹ ಬಾರಿಸಿದ್ದಾರೆ. ಅದು ಕೂಡ 7 ವರ್ಷಗಳ ಬಳಿಕ ಎಂಬುದೇ ಅಚ್ಚರಿ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ 33 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 59 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಮೂರನೇ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕರುಣ್ ನಾಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಇಂಡಿಯನ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಕರುಣ್ ಬರೋಬ್ಬರಿ 2519 ದಿನಗಳ ಬಳಿಕ ಐಪಿಎಲ್ನಲ್ಲಿ ಅರ್ಧಶತಕ ಬಾರಿಸಿದರು.

ಅಂದರೆ ಕರುಣ್ ನಾಯರ್ ಕೊನೆಯ ಬಾರಿಗೆ ಐಪಿಎಲ್ನಲ್ಲಿ ಅರ್ಧಶತಕ ಬಾರಿಸಿದ್ದು 2018 ರಲ್ಲಿ. ಅಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 26 ಎಸೆತಗಳಲ್ಲಿ 54 ರನ್ ಬಾರಿಸಿದ್ದರು. ಆ ಬಳಿಕ ಕಳಪೆ ಫಾರ್ಮ್ನಿಂದ ಬಳಲಿದ್ದ ಕರುಣ್ ನಾಯರ್ಗೆ ಸರಿಯಾದ ಅವಕಾಶ ದೊರೆತಿರಲಿಲ್ಲ. ಅಲ್ಲದೆ ಕೆಲ ಸೀಸನ್ ಐಪಿಎಲ್ನಿಂದಲೂ ಹೊರಬಿದ್ದಿದ್ದರು.

ಇದೀಗ ಬರೋಬ್ಬರಿ 7 ವರ್ಷಗಳ ಬಳಿಕ ಐಪಿಎಲ್ನಲ್ಲಿ ಹಾಫ್ ಸೆಂಚುರಿ ಸಿಡಿಸುವಲ್ಲಿ ಕರುಣ್ ನಾಯರ್ ಯಶಸ್ವಿಯಾಗಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ 40 ಎಸೆತಗಳನ್ನು ಎದುರಿಸಿದ ಕರುಣ್ 5 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 89 ರನ್ ಬಾರಿಸಿದರು. ಈ ಸ್ಪೋಟಕ ಇನಿಂಗ್ಸ್ನ ಹೊರತಾಗಿಯೂ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ರನ್ಗಳಿಂದ ಸೋಲೊಪ್ಪಿಕೊಂಡಿತು.



















