- Kannada News Photo gallery Cricket photos Meg Lanning become the fastest woman to score 9000 T20 Runs
Meg Lanning: ಸೋಫಿ ಡಿವೈನ್ ದಾಖಲೆ ಉಡೀಸ್: ವಿಶ್ವ ದಾಖಲೆ ಬರೆದ ಮೆಗ್ ಲ್ಯಾನಿಂಗ್
Meg Lanning Records: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯಾಕರ್ಷಕ ಅರ್ಧಶತಕ ಬಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ವಿಶೇಷ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಆರ್ಸಿಬಿ ತಂಡದ ಆಟಗಾರ್ತಿ ಸೋಫಿ ಡಿವೈನ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
Updated on: Mar 04, 2024 | 10:37 AM

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 10ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ (Meg Lanning) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಲ್ಯಾನಿಂಗ್ 41 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 55 ರನ್ ಬಾರಿಸಿದ್ದರು.

ಈ 55 ರನ್ಗಳೊಂದಿಗೆ ಮೆಗ್ ಲ್ಯಾನಿಂಗ್ ಟಿ20 ಕ್ರಿಕೆಟ್ನಲ್ಲಿ 9000 ರನ್ ಪೂರೈಸಿದ್ದಾರೆ. ಈ ಮೂಲಕ ಮಹಿಳಾ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 9 ಸಾವಿರ ರನ್ ಕಲೆಹಾಕಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ನ್ಯೂಝಿಲೆಂಡ್ನ ಸೋಫಿ ಡಿವೈನ್ ಹೆಸರಿನಲ್ಲಿತ್ತು. ಆರ್ಸಿಬಿ ಪರ ಆಡುತ್ತಿರುವ ಸೋಫಿ 297 ಇನಿಂಗ್ಸ್ಗಳ ಮೂಲಕ ಟಿ20 ಕ್ರಿಕೆಟ್ನಲ್ಲಿ 9 ಸಾವಿರ ರನ್ ಪೂರೈಸಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಮೆಗ್ ಲ್ಯಾನಿಂಗ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ 289 ಇನಿಂಗ್ಸ್ಗಳ ಮೂಲಕ ಟಿ20 ಕ್ರಿಕೆಟ್ನಲ್ಲಿ 9 ಸಾವಿರ ರನ್ ಕಲೆಹಾಕಿದ್ದು, ಈ ಮೂಲಕ ವುಮೆನ್ಸ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 9000 ರನ್ ಪೂರೈಸಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ಬಾರಿಸಿದ 55 ರನ್ಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು. 164 ರನ್ಗಳ ಗುರಿ ಪಡೆದ ಗುಜರಾತ್ ಜೈಂಟ್ಸ್ ತಂಡವು 138 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 25 ರನ್ಗಳ ಭರ್ಜರಿ ಜಯ ಸಾಧಿಸಿದೆ.



















