Champions Trophy 2025: ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಆಘಾತ
Champions Trophy 2025: ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದ್ದು, ಮಾರ್ಚ್ 9 ರವರೆಗೆ ನಡೆಯಲಿದೆ. ಈ ಟೂರ್ನಿಗೆ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಅಲಭ್ಯರಾಗಿದ್ದಾರೆ. ಹೀಗಾಗಿ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿದೆ.
Updated on:Feb 01, 2025 | 10:24 AM

ಫೆಬ್ರವರಿ 19 ರಿಂದ ಶುರುವಾಗಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ಆಸೀಸ್ ಪಡೆಯ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದ ಮಾರ್ಷ್ ಇನ್ನೂ ಸಹ ಚೇತರಿಸಿಕೊಂಡಿಲ್ಲ.

ಇದೀಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗಿರುವ ಮಿಚೆಲ್ ಮಾರ್ಷ್ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸಂಪೂರ್ಣ ಗುಣಮುಖರಾಗುವ ಸಾಧ್ಯತೆಯಿಲ್ಲ ಎಂದು ವೈದ್ಯಕೀಯ ವರದಿಗಳು ತಿಳಿಸಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲು ಮಾರ್ಷ್ ನಿರ್ಧರಿಸಿದ್ದಾರೆ.

ಇದಕ್ಕೂ ಮುನ್ನ ಚಾಂಪಿಯನ್ಸ್ ಟ್ರೋಫಿಗಾಗಿ ಪ್ರಕಟಿಸಲಾದ 15 ಸದಸ್ಯರ ಆಸ್ಟ್ರೇಲಿಯಾ ತಂಡದಲ್ಲಿ ಮಿಚೆಲ್ ಮಾರ್ಷ್ ಆಲ್ರೌಂಡರ್ ಆಗಿ ಸ್ಥಾನ ಪಡೆದಿದ್ದರು. ಆದರೀಗ ಅವರು ಹೊರಗುಳಿದಿರುವ ಕಾರಣ ಬದಲಿ ಆಲ್ರೌಂಡರ್ನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿದೆ.

ಅತ್ತ ಮತ್ತೋರ್ವ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಪರಿಗಣಿಸಿಲ್ಲ. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಗ್ರೀನ್ ಚೇತರಿಸಿಕೊಂಡರೆ, ಅವರಿಗೆ ಅವಕಾಶ ಸಿಗಬಹುದು. ಇಲ್ಲದಿದ್ದರೆ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ನಲ್ಲಿ ಮಿಂಚಿದ್ದ ಬ್ಯೂ ವೆಬ್ಸ್ಟರ್ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಯಿದೆ.

ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಆರೋನ್ ಹಾರ್ಡಿ, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಆ್ಯಡಂ ಝಂಪಾ.
Published On - 10:24 am, Sat, 1 February 25



















