- Kannada News Photo gallery Cricket photos IND vs ENG Saqib Mahmood creates history with triple-wicket maiden vs India
IND vs ENG: 6 ಎಸೆತಗಳಲ್ಲಿ 3 ವಿಕೆಟ್; ಟಿ20 ಕ್ರಿಕೆಟ್ನಲ್ಲಿ ದಾಖಲೆ ಬರೆದ ಪಾಕ್ ಮೂಲದ ವೇಗಿ
Saqib Mahmood: ಪುಣೆಯಲ್ಲಿ ನಡೆದ ಭಾರತ-ಇಂಗ್ಲಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಸಾಕಿಬ್ ಮಹಮೂದ್ ತಮ್ಮ ಮೊದಲ ಓವರ್‌ನಲ್ಲಿ ಮೂರು ಪಡೆದು ಸಂಚಲನ ಮೂಡಿಸಿದಲ್ಲದೆ ಆ ಓವರ್‌ನಲ್ಲಿ ಯಾವುದೇ ರನ್ ಬಿಟ್ಟುಕೊಡದೆ ಚುಟುಕು ಮಾದರಿಯಲ್ಲಿ ದಾಖಲೆ ಕೂಡ ನಿರ್ಮಿಸಿದರು.
Updated on: Feb 01, 2025 | 4:54 PM

ಪುಣೆಯಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 15 ರನ್‌ಗಳಿಂದ ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದಲ್ಲದೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿತು. ಈ ಮೂಲಕ ತವರಿನಲ್ಲಿ ಸತತ 17 ನೇ ಸರಣಿಯನ್ನು ಗೆದ್ದುಕೊಂಡ ದಾಖಲೆಯನ್ನು ಬರೆಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಗೆಲುವಿಗೆ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಸಿಡಿಸಿದ ಅರ್ಧಶತಕದ ಇನ್ನಿಂಗ್ಸ್ ಪ್ರಮುಖ ಕಾರಣವಾಯಿತು. ಈ ಇಬ್ಬರು ಆಟಗಾರರು ಇನ್ನಿಂಗ್ಸ್ ನಿಭಾಯಿಸದಿದ್ದರೆ, ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಖಾತ್ರಿಯಾಗಿತ್ತು. ಇದಕ್ಕೆ ಕಾರಣ ಈ ಸರಣಿಯಲ್ಲಿ ಚೊಚ್ಚಲ ಪಂದ್ಯವನ್ನಾಡಿದ ವೇಗಿ ಸಾಕಿಬ್ ಮಹಮೂದ್.

ಭಾರತ ವಿರುದ್ಧದ ಸರಣಿಗೆ ತಂಡದಲ್ಲಿ ಆಯ್ಕೆಯಾಗಿದ್ದರೂ ಸಾಕಿಬ್ ಮಹಮೂದ್ಗೆ ಮೊದಲ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ನಾಲ್ಕನೇ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದ ಸಾಕಿಬ್, ತನ್ನ ಮೊದಲ ಓವರ್ನಲ್ಲೇ ಟೀಂ ಇಂಡಿಯಾಕ್ಕೆ ಹ್ಯಾಟ್ರಿಕ್ ಆಘಾತ ನೀಡಿದರು.

ಭಾರತದ ಇನ್ನಿಂಗ್ಸ್‌ನ ಎರಡನೇ ಓವರ್ ಬೌಲ್ ಮಾಡಿದ ಸಾಕಿಬ್ ಮಹಮೂದ್ ಅದೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದು ಭಾರತದ ಅಗ್ರ ಕ್ರಮಾಂಕವನ್ನು ಧ್ವಂಸಗೊಳಿಸಿದರು. ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್ (1) ಮತ್ತು ಎರಡನೇ ಎಸೆತದಲ್ಲಿ ತಿಲಕ್ ವರ್ಮಾ (0) ಅವರನ್ನು ಔಟ್ ಮಾಡಿದ ಅವರು ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ (0) ಅವರನ್ನು ಔಟ್ ಮಾಡಿದರು.

ಕುತೂಹಲಕಾರಿ ವಿಷಯವೆಂದರೆ ಶಕೀಬ್ ಈ ಓವರ್‌ನಲ್ಲಿ ಯಾವುದೇ ರನ್ ಬಿಟ್ಟುಕೊಡಲಿಲ್ಲ, ಅಂದರೆ ಅವರು ಮೇಡನ್ ಓವರ್ ಬೌಲ್ ಮಾಡಿದರು. ಇದರೊಂದಿಗೆ, ಅವರು ಭಾರತ ವಿರುದ್ಧದ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಓವರ್‌ನಲ್ಲಿ ಮೂರು ವಿಕೆಟ್ ಪಡೆದ ಇಂಗ್ಲೆಂಡ್ ಅಥವಾ ಯಾವುದೇ ತಂಡದ ಮೊದಲ ಬೌಲರ್ ಎನಿಸಿಕೊಂಡರು.

ಇದಲ್ಲದೆ, ಇನ್ನಿಂಗ್ಸ್‌ನ ಎರಡನೇ ಓವರ್ ಎಸೆದು ಅದೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಅವರು ಜಮೈಕಾದ ಜೆರೋಮ್ ಟೇಲರ್ ದಾಖಲೆಯನ್ನು ಸರಿಗಟ್ಟಿದರು. ಈ ಹಿಂದೆ ಜೆರೋಮ್ ಟೇಲರ್ 2007 ರಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಎರಡನೇ ಓವರ್‌ನಲ್ಲಿ ಮೂರು ವಿಕೆಟ್ ಪಡೆದು ಈ ಸಾಧನೆ ಮಾಡಿದ್ದರು.

ವಾಸ್ತವವಾಗಿ ಸಾಕಿಬ್ ಮಹಮೂದ್ ಪಾಕಿಸ್ತಾನಿ ಮೂಲದ ಕ್ರಿಕೆಟಿಗ. ಹೀಗಾಗಿಯೇ ಅವರು ಭಾರತಕ್ಕೆ ಬರಲು ಸಾಕಷ್ಟು ವೀಸಾ ಸಮಸ್ಯೆಯನ್ನು ಎದುರಿಸಬೇಕಾಯಿತು. ಅಂದಹಾಗೆ, ಸಾಕಿಬ್ ಹುಟ್ಟಿದ್ದು ಇಂಗ್ಲೆಂಡ್ನಲ್ಲಿಯಾದರೂ ಅವರ ಪೋಷಕರ ಮೂಲ ಸ್ಥಾನ ಪಾಕಿಸ್ತಾನ. 2019 ರಲ್ಲಿ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸಾಕಿಬ್ ಈ ಮಾದರಿಯಲ್ಲಿ ಇದುವರೆಗೆ 21 ವಿಕೆಟ್ ಉರುಳಿಸಿದ್ದಾರೆ.



















