ಐಪಿಎಲ್ ಸೀಸನ್ 17 ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿರುವ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಹೆಸರು ಮುಂಚೂಣಿಯಲ್ಲಿದೆ. ವಿಶ್ವದ ಅತ್ಯುತ್ತಮ ಎಡಗೈ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಸ್ಟಾರ್ಕ್ 8 ವರ್ಷಗಳ ಬಳಿಕ ಮತ್ತೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಅದರಂತೆ ಇದೀಗ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜಿಗಾಗಿ ಮಿಚೆಲ್ ಸ್ಟಾರ್ಕ್ ಹೆಸರು ನೀಡಿದ್ದಾರೆ. ಇದರ ಬೆನ್ನಲ್ಲೇ ಕೆಲ ಫ್ರಾಂಚೈಸ್ಗಳು ಸ್ಟಾರ್ಕ್ ಅವರೊಂದಿಗೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.
ಈ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಇರುವುದು ವಿಶೇಷ. ಅಂದರೆ ಸ್ಟಾರ್ಕ್ ಅವರ ಲಭ್ಯತೆಯ ಬಗ್ಗೆ ಆರ್ಸಿಬಿ ಫ್ರಾಂಚೈಸ್ ಖಚಿತತೆ ಪಡೆದುಕೊಂಡಿದೆ. ಹೀಗಾಗಿ ಮುಂಬರುವ ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗಿಯ ಖರೀದಿಗೆ ಆರ್ಸಿಬಿ ಆಸಕ್ತಿವಹಿಸಲಿದೆ.
ಆದರೆ ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಆಸ್ಟ್ರೇಲಿಯನ್ ವೇಗಿಯನ್ನು ಖರೀದಿಸಲು ಪ್ಲ್ಯಾನ್ ರೂಪಿಸುತ್ತಿದೆ. ಏಕೆಂದರೆ ಪ್ರಸ್ತುತ ಸಿಎಸ್ಕೆ ತಂಡದಲ್ಲಿ ಯಾವುದೇ ಅನುಭವಿ ವೇಗದ ಬೌಲರ್ ಇಲ್ಲ. ಅಲ್ಲದೆ 31.40 ಕೋಟಿ ರೂ. ಪರ್ಸ್ ಮೊತ್ತವನ್ನು ಹೊಂದಿರುವ ಸಿಎಸ್ಕೆಯ ಮೊದಲ ಆದ್ಯತೆ ವೇಗದ ಬೌಲರ್ ಆಗಿರಲಿರಲಿದ್ದಾರೆ. ಹೀಗಾಗಿ ಮೊದಲ ಸುತ್ತಿನಲ್ಲೇ ಚೆನ್ನೈ ಫ್ರಾಂಚೈಸ್ಯು ಮಿಚೆಲ್ ಸ್ಟಾರ್ಕ್ ಅನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನ ನಡೆಸಲಿದೆ.
ಇತ್ತ ಆರ್ಸಿಬಿ ತಂಡವು ತನ್ನ ಮಾಜಿ ವೇಗಿಯನ್ನು ಬಿಟ್ಟು ಕೊಡುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ ಮಿಚೆಲ್ ಸ್ಟಾರ್ಕ್ ಖರೀದಿಗಾಗಿ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಅಂದಹಾಗೆ ಮಿಚೆಲ್ ಸ್ಟಾರ್ಕ್ ಐಪಿಎಲ್ನಲ್ಲಿ ಕೇವಲ 2 ಸೀಸನ್ ಮಾತ್ರ ಆಡಿದ್ದಾರೆ. ಅದು ಕೂಡ ಆರ್ಸಿಬಿ ಪರ ಮಾತ್ರ. 2014 ಮತ್ತು 2015 ರಲ್ಲಿ ಆರ್ಸಿಬಿ ಪರ 27 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸ್ಟಾರ್ಕ್ 34 ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ಈ ಬಾರಿ ಕೂಡ ಆರ್ಸಿಬಿ ಮಿಚೆಲ್ ಸ್ಟಾರ್ಕ್ ಖರೀದಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುವುದಂತು ದಿಟ. ಆದರೆ ಈ ಪ್ರಯತ್ನಕ್ಕೆ ಸಿಎಸ್ಕೆ ಅಡ್ಡಿಯಾಗಲಿದೆಯಾ ಕಾದು ನೋಡಬೇಕಿದೆ.
Published On - 8:37 pm, Tue, 5 December 23