ಶುಕ್ರವಾರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಭಾರಿ ಪೈಪೋಟಿ ನೀಡಿ 4 ರನ್ಗಳಿಂದ ಸೋಲು ಕಂಡಿತು. 168 ರನ್ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಆಟಗಾರರು ಕೊನೆಯ ಓವರ್ನವರೆಗೂ ಗೆಲುವಿಗೆ ಹೋರಾಡಿ ಸೋತರು. ಈ ಸೋಲಿನ ಬೆನ್ನಲ್ಲೇ ಅಫ್ಘಾನ್ ತಂಡದ ನಾಯಕ ಮೊಹಮ್ಮದ್ ನಬಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಸೋಲುವ ಮೂಲಕ ವಿಶ್ವಕಪ್ನಿಂದ ಹೊರಬಿದ್ದ ಕೆಲವೇ ಗಂಟೆಗಳ ಬಳಿಕ ಆಲ್‌ರೌಂಡರ್ ಮುಹಮ್ಮದ್ ನಬಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮ್ಯಾನೇಜ್‌ಮೆಂಟ್ ಹಾಗೂ ತಂಡಕ್ಕೆ ಅಗತ್ಯವಿದ್ದರೆ ದೇಶದ ಪರವಾಗಿ ಆಡುವುದನ್ನು ಮುಂದುವರಿಸುವೆ ಎಂದು 37ರ ಹರೆಯದ ನಬಿ ಹೇಳಿದ್ದಾರೆ.
ನಾಯಕತ್ವದಿಂದ ಕೆಳಗಿಳಿದಿರುವುದಕ್ಕೆ ಕಾರಣವನ್ನು ಕೂಡ ವಿವರಿಸಿರುವ ನಬಿ, ಕಳೆದ ಒಂದು ವರ್ಷದಿಂದ ನಮ್ಮ ತಂಡದ ಸಿದ್ಧತೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ದೊಡ್ಡ ಪಂದ್ಯಾವಳಿಗೂ ಮುನ್ನ ನಾಯಕ ಬಯಸುವ ದೊಡ್ಡ ಮಟ್ಟದ ತಯಾರಿ ಇರಲಿಲ್ಲ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ ಕಳೆದ ಕೆಲವು ಪ್ರವಾಸಗಳ ವೇಳೆ ತಂಡದ ಮ್ಯಾನೇಜರ್, ಆಯ್ಕೆ ಸಮಿತಿ ಮತ್ತು ನನ್ನ ಯೋಜನೆ, ನಿರ್ಧಾರವೆಲ್ಲವೂ ಬೇರೆ ಬೇರೆಯಾಗಿದ್ದವು. ಹೀಗಾಗಿ ತಂಡದ ಸಮತೋಲನ ತಪ್ಪಿತು. ಆದ್ದರಿಂದ ತಕ್ಷಣದಿಂದಲೇ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ತಂಡದ ಆಡಳಿತ ಬಯಸುವುದಾದರೆ ಆಟಗಾರನಾಗಿ ಮುಂದುವರಿಯಲು ಸಿದ್ಧನಿದ್ದೇನೆ ಎಂಬುದಾಗಿ ಮೊಹಮ್ಮದ್ ನಬಿ ತಿಳಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ ಅಫ್ಘಾನಿಸ್ತಾನ ತಂಡ ಆಡಿದ ಪಂದ್ಯಗಳಲ್ಲಿ ಗೆಲುವಿಗೆ ಕಠಿಣ ಹೋರಾಟ ನಡೆಸಿದೆ. ಆದರೆ, ಯಾವುದೇ ಗೆಲುವು ಪಡೆಯದೆ ವಿಶ್ವಕಪ್ ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿತು. ಎರಡು ಪಂದ್ಯಗಳು ರದ್ದುಗೊಂಡರೆ, ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ಆಫ್ ಸ್ಪಿನ್ನರ್ ಆಗಿರುವ ಮೊಹಮ್ಮದ್ ನಬಿ 2010ರಲ್ಲಿ ಅಫ್ಘಾನಿಸ್ತಾನದ ಪರ ಚೊಚ್ಚಲ ಪಂದ್ಯವನ್ನಾಡಿದರು. ಈವರೆಗೆ 104 ಟಿ-20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರೆ.
ಆಸೀಸ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ಗಳನ್ನು ಪೇರಿಸಿತು. ಟಾರ್ಗೆಟ್ ಬೆನ್ನಟ್ಟಿದ ಅಫ್ಘಾನಿಸ್ತಾನ 164 ರನ್ಗಳನ್ನು ಪೇರಿಸಿ ಕೊನೆಗೆ ಸೋಲು ಕಂಡಿತು. ರಶೀದ್ ಖಾನ್ 23 ಎಸೆತಗಳಲ್ಲಿ 4 ಸಿಕ್ಸರ್ಗಳು ಮತ್ತು 3 ಬೌಂಡರಿಗಳ ಸಮೇತ 48 ರನ್ಗಳನ್ನು ಬಾರಿಸಿದರು.
Published On - 10:37 am, Sat, 5 November 22