
ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಶಮಿ ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಮೂಲಕ ಮತ್ತೆ ಟೀಂ ಇಂಡಿಯಾಕ್ಕೆ ಸೇರುವ ಸುಳಿವು ನೀಡಿದ್ದರು. ಇದೀಗ ಎರಡನೇ ಪಂದ್ಯವನ್ನಾಡುತ್ತಿರುವ ಶಮಿಯನ್ನು ಬಿಸಿಸಿಐ ಆಯ್ಕೆ ಮಂಡಳಿಯ ಸದಸ್ಯರು ಭೇಟಿಯಾಗಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಾಸ್ತವವಾಗಿ ಫಿಟ್ನೆಸ್ ಸಮಸ್ಯೆಗಳಿಂದಾಗಿ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗದ ಶಮಿ ಅವರನ್ನು ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಗೂ ಕಡೆಗಣಿಸಲಾಯಿತು, ಇದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತು. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಶಮಿ, ತಾನು ಆಯ್ಕೆಗೆ ಫಿಟ್ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದರು. ಅಲ್ಲದೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತನ್ನನ್ನು ಕಡೆಗಣಿಸಿದ್ದ ಆಯ್ಕೆ ಮಂಡಳಿ ವಿರುದ್ಧ ಶಮಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಶಮಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡದ ಬಗ್ಗೆ ಮಾತನಾಡಿದ್ದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ಶಮಿ ಅವರ ಫಿಟ್ನೆಸ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶಮಿ, ಈ ಬಗ್ಗೆ ನನ್ನನ್ನು ಕೇಳಿದರೆ ತಾನೇ ಗೊತ್ತಾಗುವುದು ಎಂದಿದ್ದರು. ಶಮಿ ಮಾಧ್ಯಮಗಳ ಮುಂದೆ ಇಂತಹ ಬಹಿರಂಗ ಹೇಳಿಕೆಯನ್ನು ನೀಡಿದ್ದು, ಅಗರ್ಕರ್ ಅವರನ್ನು ಕೆರಳಿಸಿತ್ತು. ಇದೀಗ ಇದೆಲ್ಲದರ ನಡುವೆ ಆಯ್ಕೆ ಮಂಡಳಿಯ ಸದಸ್ಯರಾದ ಆರ್.ಪಿ ಸಿಂಗ್ ಅವರು ಶಮಿ ಅವರನ್ನು ನೇರವಾಗಿ ಭೇಟಿಯಾಗಿ ಆಯ್ಕೆ ವಿಷಯದ ಬಗ್ಗೆ ದೀರ್ಘ ಚರ್ಚೆ ನಡೆಸಿದ್ದಾರೆ.

ಸ್ಪೋರ್ಟ್ಸ್‌ಕೀಡಾದ ವರದಿಯ ಪ್ರಕಾರ, ರಣಜಿ ಪಂದ್ಯದ ಎರಡನೇ ದಿನದ ಆಟದ ನಂತರ ಆರ್‌ಪಿ ಸಿಂಗ್ ವಿಶೇಷವಾಗಿ ಶಮಿ ಅವರನ್ನು ಭೇಟಿ ಮಾಡಿದ್ದು, ಬಹಳ ಸಮಯ ಚರ್ಚೆ ನಡೆಸಿದ್ದಾರೆ. ಆದರೆ ಇವರಿಬ್ಬರ ಭೇಟಿಯಲ್ಲಿ ಯಾವುದರ ಬಗ್ಗೆ ಚರ್ಚಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ ಮಾಧ್ಯಮಗಳ ಮುಂದೆ ಬಿಸಿಸಿಐ ವಿರುದ್ಧ ಬಹಿರಂಗ ಹೇಳಿಕೆ ನೀಡಿದರ ಬಗ್ಗೆ ಚರ್ಚಿಸಿರಬಹುದು ಎನ್ನಲಾಗುತ್ತಿದೆ.

ಆದರೆ ಬಿಸಿಸಿಐ ಆಯ್ಕೆದಾರರು ರಣಜಿ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ಆಗಾಗ್ಗೆ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ವಿಶೇಷವಾಗಿ ಅವರು ಟೀಂ ಇಂಡಿಯಾ ಆಟಗಾರನನ್ನು ಒಳಗೊಂಡ ಪಂದ್ಯಗಳನ್ನು ಹೆಚ್ಚಾಗಿ ವೀಕ್ಷಿಸುತ್ತಾರೆ. ಆದಾಗ್ಯೂ, ಶಮಿ ಮತ್ತು ಅಗರ್ಕರ್ ನಡುವಿನ ಮಾತಿನ ಯುದ್ಧವು ಈ ಚರ್ಚೆಯನ್ನು ಇನ್ನಷ್ಟು ಮಹತ್ವದ್ದಾಗಿ ಮಾಡಿದೆ.