2025 ರ ಐಪಿಎಲ್ನ 14ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ 8 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿದೆ. ಆರ್ಸಿಬಿ ವೇಗಕ್ಕೆ ಕಡಿವಾಣ ಹಾಕುವುದರಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರವಹಿಸಿದರು.
ವಾಸ್ತವವಾಗಿ ಕಳೆದ ಆವೃತ್ತಿಯವರೆಗೂ ಆರ್ಸಿಬಿ ತಂಡದ ಪರ ಆಡುತ್ತಿದ್ದ ಸಿರಾಜ್, ಈ ಆವೃತ್ತಿಯಲ್ಲಿ ಗುಜರಾತ್ ತಂಡದ ಪರ ಆಡುತ್ತಿದ್ದಾರೆ. ಇದರೊಂದಿಗೆ ತನ್ನ ಮಾಜಿ ತಂಡದ ವಿರುದ್ಧ ಮೊದಲ ಪಂದ್ಯವನ್ನು ಆಡುತ್ತಿರುವ ಸಿರಾಜ್, ಮಾರಕ ಪ್ರದರ್ಶನ ನೀಡಿದ್ದಾರೆ.
ಆರ್ಸಿಬಿ ವಿರುದ್ಧ ತಮ್ಮ ಖೋಟಾದ 4 ಓವರ್ಗಳನ್ನು ಬೌಲ್ ಮಾಡಿದ ಸಿರಾಜ್ ಕೇವಲ 19 ರನ್ ನೀಡಿ ಪ್ರಮುಖ 3 ವಿಕೆಟ್‌ಗಳನ್ನು ಉರುಳಿಸಿದರು. ಅಚ್ಚರಿಯ ಸಂಗತಿಯೆಂದರೆ ಇದು ಐಪಿಎಲ್ ಇತಿಹಾಸದಲ್ಲಿ ಸಿರಾಜ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಇದಕ್ಕೂ ಮುನ್ನ ಸಿರಾಜ್ 21 ರನ್‌ಗಳಿಗೆ 4 ವಿಕೆಟ್ ಪಡೆದಿದ್ದು ಉತ್ತಮ ಪ್ರದರ್ಶನವಾಗಿತ್ತು.
ಇನ್ನು ಈ ಪಂದ್ಯದಲ್ಲಿ ಗುಜರಾತ್ ಪರ ಬೌಲಿಂಗ್ ಆರಂಭಿಸಿದ ಸಿರಾಜ್ ಮೊದಲ ಓವರ್ನಲ್ಲಿ ಕೊಹ್ಲಿ ಎದುರು ಬೌಂಡರಿ ಹೊಡೆಸಿಕೊಂಡ ಸಿರಾಜ್, ಅದೇ ಓವರ್ನಲ್ಲಿ ವಿಕೆಟ್ನ ಅವಕಾಶವನ್ನು ಸೃಷ್ಟಿಸಿದ್ದರು. ಆದರೆ ವಿಕೆಟ್ ಕೀಪರ್ ಜೋಸ್ ಬಟ್ಲರ್, ಆರಂಭಿಕ ಫಿಲ್ ಸಾಲ್ಟ್ ಅವರ ಸುಲಭ ಕ್ಯಾಚನ್ನು ಕೈಚೆಲ್ಲಿದರು.
ಆದಾಗ್ಯೂ ತಾನು ಎಸೆದ ಎರಡನೇ ಓವರ್ನಲ್ಲೇ ಆರ್ಸಿಬಿಗೆ ಆಘಾತ ನೀಡಿದ ಮೊಹಮ್ಮದ್ ಸಿರಾಜ್, ಕನ್ನಡಿಗ ದೇವದತ್ ಪಡಿಕ್ಕಲ್ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಸಿರಾಜ್ ಓವರ್ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ಪಡಿಕ್ಕಲ್ ನಂತರದ ಎಸೆತದವನ್ನು ಸಹ ಬೌಂಡರಿಗಟ್ಟುವ ಯತ್ನದಲ್ಲಿ ಕ್ಲೀನ್ ಬೌಲ್ಡ್ ಆದರು.
ನಂತರ ತಮ್ಮ ಖೋಟಾದ ಮೂರನೇ ಓವರ್ ಬೌಲ್ ಮಾಡಿದ ಸಿರಾಜ್ ಈ ಓವರ್ನಲ್ಲೂ ವಿಕೆಟ್ ಪಡೆದರು. ಈ ವೇಳೆ ಸಿರಾಜ್, ಮೊದಲ ಓವರ್ನಲ್ಲಿ ಜೀವದಾನ ಪಡೆದಿದ್ದ ಫಿಲ್ ಸಾಲ್ಟ್ರನ್ನು ಬಲಿ ಪಡೆದರು. ಈ ಓವರ್ನಲ್ಲೂ ಸಹ ಸಿರಾಜ್ ಎಸೆತಕ್ಕೆ ಔಟಾಗುವುದಕ್ಕೂ ಮುನ್ನ ಭರ್ಜರಿ ಸಿಕ್ಸರ್ ಸಿಡಿಸಿದ ಫಿಲ್ ಸಾಲ್ಟ್ ನಂತರದ ಎಸೆತವನ್ನು ಸಿಕ್ಸರ್ಗಟ್ಟುವ ಯತ್ನದಲ್ಲಿ ಕ್ಲೀನ್ ಬೌಲ್ಡ್ ಆದರು.
ಕೊನೆಯಲ್ಲಿ ತಮ್ಮ ಖೋಟಾದ 4ನೇ ಓವರ್ ಬೌಲ್ ಮಾಡಲು ಬಂದ ಸಿರಾಜ್ ಈ ಓವರ್ನಲ್ಲೂ ಪ್ರಮುಖ ವಿಕೆಟ್ ಕಬಳಿಸಿದರು. ಆರ್ಸಿಬಿ ಪರ ಅರ್ಧಶತಕದ ಇನ್ನಿಂಗ್ಸ್ ಆಡಿದ ಲಿಯಮ್ ಲಿವಿಂಗ್ಸ್ಟೋನ್ರನ್ನು ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದರು.