
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಏಷ್ಯಾದಲ್ಲಿ ಹೊಸ ಇತಿಹಾಸ ಬರೆಯುವ ಹೊಸ್ತಿಲ್ಲಲಿದ್ದಾರೆ. ಅದು ಕೂಡ ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಎಂಬುದು ವಿಶೇಷ. ಅಂದರೆ ಏಷ್ಯಾದಲ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಇಂಗ್ಲೆಂಡ್ ಕ್ಯಾಪ್ಟನ್ ಎಂಬ ದಾಖಲೆ ಬರೆಯಲು ಉತ್ತಮ ಅವಕಾಶವಿದೆ.

ಈಗಾಗಲೇ ಏಷ್ಯಾದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಬೆನ್ ಸ್ಟೋಕ್ಸ್ ಟೀಮ್ ಇಂಡಿಯಾ ವಿರುದ್ಧದ ಮುಂಬರುವ 4 ಪಂದ್ಯಗಳಲ್ಲಿ 3 ರಲ್ಲಿ ಜಯ ಸಾಧಿಸಿದರೆ ಹೊಸ ದಾಖಲೆ ನಿರ್ಮಾಣವಾಗಲಿದೆ. ಅದು ಸಹ ಸಹ ಆಟಗಾರ, ಮಾಜಿ ನಾಯಕ ಜೋ ರೂಟ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ ಏಷ್ಯಾದಲ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಇಂಗ್ಲೆಂಡ್ ನಾಯಕ ಎಂಬ ದಾಖಲೆ ಜೋ ರೂಟ್ ಹೆಸರಿನಲ್ಲಿದೆ. ಜೋ ರೂಟ್ ನಾಯಕತ್ವದಲ್ಲಿ ಇಂಗ್ಲೆಂಡ್ ಏಷ್ಯಾದಲ್ಲಿ ಒಟ್ಟು 9 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ 6 ಪಂದ್ಯಗಳಲ್ಲಿ ಇಂಗ್ಲೆಂಡ್ ಜಯ ಸಾಧಿಸಿದೆ.

ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಮಾಜಿ ನಾಯಕ ಅಲಿಸ್ಟರ್ ಕುಕ್. ಏಷ್ಯಾದಲ್ಲಿ ಕುಕ್ ಸಾರಥ್ಯದಲ್ಲಿ ಇಂಗ್ಲೆಂಡ್ ಒಟ್ಟು 16 ಪಂದ್ಯಗಳನ್ನಾಡಿದ್ದು, ಈ ವೇಳೆ 5 ಮ್ಯಾಚ್ಗಳಲ್ಲಿ ಆಂಗ್ಲರು ಜಯ ಸಾಧಿಸಿದ್ದಾರೆ.

ಇದೀಗ ಏಷ್ಯಾದಲ್ಲಿ ನಾಲ್ಕು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿರುವ ಬೆನ್ ಸ್ಟೋಕ್ಸ್ 4 ಮ್ಯಾಚ್ಗಳಲ್ಲೂ ಗೆಲುವಿನ ನಗೆ ಬೀರಿದ್ದಾರೆ. ಅಲ್ಲದೆ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ, ಅಲಿಸ್ಟರ್ ಕುಕ್ ಅವರ 5 ಜಯದ ದಾಖಲೆಯನ್ನು ಸ್ಟೋಕ್ಸ್ ಸರಿಗಟ್ಟಲಿದ್ದಾರೆ.

ಹಾಗೆಯೇ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ 4 ಪಂದ್ಯಗಳಲ್ಲಿ ಆಂಗ್ಲರು ಜಯ ಸಾಧಿಸಿದರೆ, ಏಷ್ಯಾದಲ್ಲಿ ಇಂಗ್ಲೆಂಡ್ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ನಾಯಕ ಎಂಬ ದಾಖಲೆ ಬೆನ್ ಸ್ಟೋಕ್ಸ್ ಪಾಲಾಗಲಿದೆ. ಅದರಂತೆ ಮುಂಬರುವ ಪಂದ್ಯಗಳ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆಯುವ ಅವಕಾಶ ಬೆನ್ ಸ್ಟೋಕ್ಸ್ ಮುಂದಿದ್ದು, ಈ ಇತಿಹಾಸವನ್ನು ಭಾರತದ ವಿರುದ್ಧದ ಸರಣಿಯಲ್ಲೇ ಬರೆಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.