Updated on: Sep 11, 2022 | 4:26 PM
ಈ ಬಾರಿಯ ಏಷ್ಯಾಕಪ್ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಒಟ್ಟು 11 ವಿಕೆಟ್ ಕಬಳಿಸಿದ್ದರು. ಈ ಹನ್ನೊಂದು ವಿಕೆಟ್ಗಳೊಂದಿಗೆ ಇದೀಗ ಭುವಿ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಅಂದರೆ ಟೀಮ್ ಇಂಡಿಯಾ ಪರ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಕೂಡ ಸ್ಥಾನ ಪಡೆದಿದ್ದಾರೆ. ಅದು ಕೂಡ ಟಿ20 ಕ್ರಿಕೆಟ್ನಲ್ಲಿ ಎಂಬುದು ವಿಶೇಷ.
ಟಿ20 ಕ್ರಿಕೆಟ್ನಲ್ಲಿ ಒಂದು ವರ್ಷದಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಇದೀಗ ಭುವನೇಶ್ವರ್ ಕುಮಾರ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿತ್ತು.
ಬುಮ್ರಾ 2016 ರಲ್ಲಿ ಒಟ್ಟು 28 ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಒಂದೇ ವರ್ಷದಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಭುವಿ ಮುರಿದಿದ್ದಾರೆ. ಹಾಗಿದ್ರೆ ಟೀಮ್ ಇಂಡಿಯಾ ಪರ ಒಂದೇ ವರ್ಷದಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳು ಯಾರೆಲ್ಲಾ ನೋಡೋಣ...
ಟೆಸ್ಟ್ ಕ್ರಿಕೆಟ್: 1983 ರಲ್ಲಿ ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ವರ್ಷ 75 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನೂ ಇಂದಿಗೂ ಭಾರತದ ಬೌಲರ್ಗೆ ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.
ಏಕದಿನ ಕ್ರಿಕೆಟ್: 1996 ರಲ್ಲಿ ಅನಿಲ್ ಕುಂಬ್ಳೆ ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಒಂದೇ ವರ್ಷ 61 ವಿಕೆಟ್ ಉರುಳಿಸಿದ್ದರು. ಈ ದಾಖಲೆಯನ್ನು ಸಹ ಟೀಮ್ ಇಂಡಿಯಾದ ಹೊಸ ಬೌಲರ್ಗಳಿಗೆ ಮುರಿಯಲು ಸಾಧ್ಯವಾಗಿಲ್ಲ.
ಟಿ20 ಕ್ರಿಕೆಟ್: ಈ ವರ್ಷ ಒಟ್ಟು 31 ವಿಕೆಟ್ ಕಬಳಿಸುವ ಮೂಲಕ ಭುವನೇಶ್ವರ್ ಕುಮಾರ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಂದರೆ ಒಂದು ಕ್ಯಾಲೆಂಡರ್ ವರ್ಷದೊಳಗೆ ಟೀಮ್ ಇಂಡಿಯಾ ಪರ ಟಿ20ಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಭುವಿ ಕೂಡ ಅಗ್ರಸ್ಥಾನಕ್ಕೇರಿದ್ದಾರೆ.