18ನೇ ಆವೃತ್ತಿಯ ಐಪಿಎಲ್ ಇದೇ ಮಾರ್ಚ್ 22 ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಳು ಮುಖಾಮುಖಿಯಾಗಲಿವೆ. ಆ ಬಳಿಕ ಆವೃತ್ತಿಯ ಮೂರನೇ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ.
ಉಭಯ ತಂಡಗಳ ಈ ಹೈವೋಲ್ಟೇಜ್ ಕಾಳಗ ಚೆನ್ನೈ ಸೂಪರ್ ಕಿಂಗ್ಸ್ನ ತವರು ನೆಲದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಇನ್ನು ಸಾಕಷ್ಟು ಸಮಯವಿದೆ. ಈ ನಡುವೆ ಸಿಎಸ್‌ಕೆ ತಂಡದ ಮಾಜಿ ನಾಯಕ ಎಂಎಸ್ ಧೋನಿಯ ಬಗ್ಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಈ ಆವೃತ್ತಿಯಲ್ಲಿ ಧೋನಿ ಆಡುವುದು ಈಗಾಗಲೇ ಖಚಿತವಾಗಿದೆ.
ಇದೀಗ ಈ ಆವೃತ್ತಿಯಲ್ಲಿ ಧೋನಿ ಬಳಸಲಿರುವ ಬ್ಯಾಟ್‌ನ ಬಗ್ಗೆ ಮಹತ್ವದ ಸುದ್ದಿ ಹೊರಬಿದ್ದಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಎಂಎಸ್ ಧೋನಿ ಐಪಿಎಲ್ 2025 ಗಾಗಿ ತಮ್ಮ ಬ್ಯಾಟ್‌ನ ತೂಕವನ್ನು 20 ಗ್ರಾಂ ಕಡಿಮೆ ಮಾಡಿಕೊಂಡಿದ್ದಾರೆ.
ವಾಸ್ತವವಾಗಿ ಧೋನಿ ತಮ್ಮ ವೃತ್ತಿಜೀವನದ ಆರಂಭದ ದಿನಗಳಿಂದಲೂ ಸುಮಾರು 1200 ಗ್ರಾಂ ತೂಕದ ಬ್ಯಾಟ್ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆ ಬಳಿಕ ಟೀಂ ಇಂಡಿಯಾ ಪರ ಆಡಲು ಆರಂಭಿಸಿದ ಬಳಿಕ 1300 ಗ್ರಾಂ ತೂಕದ ಬ್ಯಾಟ್‌ಗಳನ್ನು ಬಳಸುತ್ತಿದ್ದ ಧೋನಿ ಇದೀಗ ತಮ್ಮ ಬ್ಯಾಟ್‌ನ ತೂಕವನ್ನು ಕೊಂಚ ಇಳಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಮೀರತ್ ಮೂಲದ ಕ್ರಿಕೆಟ್ ತಯಾರಿಕಾ ಕಂಪನಿ ಸ್ಯಾನ್ಸ್‌ಪರೀಲ್ಸ್ ಗ್ರೀನ್‌ಲ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್ ಇತ್ತೀಚೆಗೆ ಧೋನಿಗೆ ನಾಲ್ಕು ಬ್ಯಾಟ್‌ಗಳನ್ನು ವಿತರಿಸಿದೆ. ಧೋನಿ ಮನೆಗೆ ಬಂದಿರುವ ಈ ಹೊಸ ಬ್ಯಾಟ್ ಸುಮಾರು 1230 ಗ್ರಾಂ ತೂಗುತ್ತಿದ್ದು, ಅವುಗಳ ಗಾತ್ರವು ಮೊದಲಿನಂತೆಯೇ ಇದೆ ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ ಅಂತ್ಯದ ವೇಳೆಗೆ ಧೋನಿ ಸಿಎಸ್‌ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಸಿಎಸ್ಕೆಯ ತರಬೇತಿ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ತರಬೇತಿಗೆ ಸಂಬಂಧಿಸಿದಂತೆ, ಮಾರ್ಚ್ 9 ರವರೆಗೆ ಎಂಎ ಚಿದಂಬರಂ ಕ್ರೀಡಾಂಗಣವನ್ನು ಬಳಸಲು ಸಾಧ್ಯವಿಲ್ಲ ಎಂದು ಸಿಎಸ್‌ಕೆ ಆಡಳಿತ ಮಂಡಳಿ ತಿಳಿಸಿದೆ. ಏಕೆಂದರೆ ಐಪಿಎಲ್ 2025 ರ ದೃಷ್ಟಿಯಿಂದ, ಬಿಸಿಸಿಐ ಕ್ರೀಡಾಂಗಣವನ್ನು ಉತ್ತಮ ಸ್ಥಿತಿಯಲ್ಲಿಡಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.