KAR vs NAM: ನಮೀಬಿಯಾ ವಿರುದ್ಧ ಕನ್ನಡಿಗನ ಸಿಡಿಲಬ್ಬರದ ಶತಕ..!
Namibia vs Karnataka: ವಿಶೇಷ ಎಂದರೆ ಇದು ನಮೀಬಿಯಾ ವಿರುದ್ಧ ಎಲ್ಆರ್ ಚೇತನ್ ಅವರ 2ನೇ ಶತಕ. ಇದಕ್ಕೂ ಮುನ್ನ 2ನೇ ಏಕದಿನ ಪಂದ್ಯದಲ್ಲಿ ಕರುನಾಡ ಕುವರ 147 ಎಸೆತಗಳಲ್ಲಿ 169 ಬಾರಿಸಿ ಮಿಂಚಿದ್ದರು.
Updated on: Jun 07, 2023 | 6:47 PM

Namibia vs Karnataka: ವಿಂಡ್ಹೋಕ್ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ನಮೀಬಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕರ್ನಾಟಕದ ಯುವ ದಾಂಡಿಗ ಎಲ್ಆರ್ ಚೇತನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರವಿಕುಮಾರ್ ಸಮರ್ಥ್ ಫೀಲ್ಡಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಶಾನ್ ಫೌಷೆಯನ್ನು ಹಾಗೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೈಕೆಲ್ ವ್ಯಾನ್ ಲಿಂಗನ್ರನ್ನು 6ನೇ ಓವರ್ನಲ್ಲಿ ವಿಜಯಕುಮಾರ್ ವೈಶಾಕ್ ಔಟ್ ಮಾಡಿ ಕರ್ನಾಟಕಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಝೇನ್ ಗ್ರೀನ್ 72 ಎಸೆತಗಳಲ್ಲಿ 3 ಫೋರ್ ಹಾಗೂ 2 ಸಿಕ್ಸ್ನೊಂದಿಗೆ ಅಜೇಯ 65 ರನ್ ಬಾರಿಸಿದರು. ಇನ್ನು ಗ್ರೀನ್ಗೆ ಸಾಥ್ ನೀಡಿದ ಬೆರ್ನಾಡ್ 6 ಭರ್ಜರಿ ಸಿಕ್ಸ್ನೊಂದಿಗೆ 49 ಎಸೆತಗಳಲ್ಲಿ 59 ರನ್ ಸಿಡಿಸಿದರು. ಇದಾಗ್ಯೂ ಕೆಲ ಕ್ರಮಾಂಕದಲ್ಲಿ ಕುಸಿತ ಕಂಡ ನಮೀಬಿಯಾ ತಂಡವು 45.1 ಓವರ್ಗಳಲ್ಲಿ 226 ರನ್ಗಳಿಸಿ ಸರ್ವಪತನ ಕಂಡಿತು.

ಕರ್ನಾಟಕ ಪರ ಶುಭಾಂಗ್ ಹೆಗ್ಡೆ 10 ಓವರ್ಗಳಲ್ಲಿ 44 ರನ್ ನೀಡಿ 3 ವಿಕೆಟ್ ಪಡೆದರೆ, ವಿಜಯಕುಮಾರ್ ವೈಶಾಕ್ 2 ವಿಕೆಟ್ ಕಬಳಿಸಿದರು. ಇನ್ನು ನಿಕಿನ್ ಜೋಸ್ ಹಾಗೂ ರಿಷಿ ಬೋಪಣ್ಣ ತಲಾ 1 ವಿಕೆಟ್ ಪಡೆದರು.

ಈ ಮೊತ್ತವನ್ನು ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಎಲ್ಆರ್ ಚೇತನ್ ಸಿಡಿಲಬ್ಬರದ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಯುವ ದಾಂಡಿಗ ನಮೀಬಿಯಾ ಬೌಲರ್ಗಳ ಬೆಂಡೆತ್ತಿದರು.

ಪರಿಣಾಮ 25 ಓವರ್ ವೇಳೆಗೆ ಕರ್ನಾಟಕ ತಂಡದ ಮೊತ್ತ 150 ರ ಗಡಿ ತಲುಪಿತು. ಇತ್ತ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಚೇತನ್ 15 ಫೋರ್ ಹಾಗೂ 1 ಭರ್ಜರಿ ಸಿಕ್ಸ್ ಸಿಡಿಸಿದರು. ಈ ಮೂಲಕ ಕೇವಲ 92 ಎಸೆತಗಳಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದರು.

ವಿಶೇಷ ಎಂದರೆ ಇದು ನಮೀಬಿಯಾ ವಿರುದ್ಧ ಎಲ್ಆರ್ ಚೇತನ್ ಅವರ 2ನೇ ಶತಕ. ಇದಕ್ಕೂ ಮುನ್ನ 2ನೇ ಏಕದಿನ ಪಂದ್ಯದಲ್ಲಿ ಕರುನಾಡ ಕುವರ 147 ಎಸೆತಗಳಲ್ಲಿ 169 ಬಾರಿಸಿ ಮಿಂಚಿದ್ದರು.
