- Kannada News Photo gallery Cricket photos Kannada News | Naveen ul haq open about fight with virat kohli in ipl 2023
Virat Kohli vs Naveen ul haq: ಕೊಹ್ಲಿ ಜೊತೆಗಿನ ಜಗಳದ ಬಗ್ಗೆ ಕೊನೆಗೂ ಮೌನ ಮುರಿದ ನವೀನ್
Naveen ul haq vs Virat Kohli: ನಾನು ಅಂಡರ್ 16 ಕ್ರಿಕೆಟ್ ಆಡುವಾಗಿಂದಲೂ ಯಾರನ್ನೂ ಮೈದಾನದಲ್ಲಿ ಕೆಟ್ಟದಾಗಿ ಬೈದಿಲ್ಲ. ಆದರೆ ನನ್ನನ್ನು ಯಾರಾದರೂ ಬೈದರೆ ಖಂಡಿತವಾಗಿಯೂ ಉತ್ತರ ನೀಡುತ್ತೇನೆ.
Updated on: Jun 14, 2023 | 11:23 PM

IPL 2023: ಐಪಿಎಲ್ ಸೀಸನ್ 16 ರ ಅತಿ ದೊಡ್ಡ ಹೈಲೈಟ್ಸ್ ಎಂದರೆ ವಿರಾಟ್ ಕೊಹ್ಲಿ, ನವೀನ್ ಉಲ್ ಹಕ್ ಹಾಗೂ ಗೌತಮ್ ಗಂಭೀರ್ ನಡುವಣ ಜಟಾಪಟಿ.

ಮೇ 1 ರಂದು ಲಕ್ನೋದಲ್ಲಿ ನಡೆದ ಆರ್ಸಿಬಿ ವಿರುದ್ಧ ನಡೆದ ಪಂದ್ಯದ ವೇಳೆ ಲಕ್ನೋ ವೇಗಿ ನವೀನ್ ಉಲ್ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ಬಳಿಕ ಹಸ್ತಲಾಘವ ಮಾಡುವ ವೇಳೆ ನವೀನ್ ಕಿಂಗ್ ಕೊಹ್ಲಿಯ ಕೈ ಎಳೆದಿದ್ದರು.

ಲಕ್ನೋ ಸೂಪರ್ ಜೈಂಟ್ಸ್ ಆಟಗಾರನ ಈ ಅತಿರೇಕದ ವರ್ತನೆಯಿಂದ ಕುಪಿತಗೊಂಡಿದ್ದ ಆರ್ಸಿಬಿ ಫ್ಯಾನ್ಸ್ ನವೀನ್ ಉಲ್ ಹಕ್ ಅವರನ್ನು ಪ್ರತಿ ಪಂದ್ಯದ ವೇಳೆ ಟಾರ್ಗೆಟ್ ಮಾಡಿದ್ದರು. ಇದರಿಂದ ನವೀನ್ ಉಲ್ ಹಕ್ ಫಜೀತಿಗೆ ಸಿಲುಕಿದ್ದರು.

ಇತ್ತ ಸೋಷಿಯಲ್ ಮೀಡಿಯಾದಲ್ಲೂ ಕಿಂಗ್ ಕೊಹ್ಲಿ ಅಭಿಮಾನಿಗಳು ಅಫ್ಘಾನ್ ಆಟಗಾರನಿಗೆ ಬಿಸಿ ಮುಟ್ಟಿಸಿದ್ದರು. ಇದೀಗ ಈ ಎಲ್ಲಾ ಘಟನೆಗಳ ಕುರಿತಾಗಿ ನವೀನ್ ಉಲ್ ಹಕ್ ಮನಬಿಚ್ಚಿ ಮಾತನಾಡಿದ್ದಾರೆ.

ಖಾಸಗಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನವೀನ್ ಉಲ್ ಹಕ್, ಐಪಿಎಲ್ ಆಡಿರುವುದು ಅತ್ಯುತ್ತಮ ಅನುಭವ. ನಾನು ಹಲವು ಲೀಗ್ಗಳಲ್ಲಿ ಆಡಿದ್ದರೂ ಐಪಿಎಲ್ ಎಂಬುದು ತುಂಬಾ ವಿಭಿನ್ನ ಅನುಭವ ನೀಡಿತ್ತು.

ನನ್ನಂತಹ ಯುವ ಆಟಗಾರರಿಗೆ ಐಪಿಎಲ್ ಎಂಬುದು ಉತ್ತಮ ವೇದಿಕೆ. ಇತರೆ ಲೀಗ್ಗಳಲ್ಲೂ ನಾವು ಕ್ರಿಕೆಟ್ ಆಡಿದ್ದರೂ, ಇಲ್ಲಿನ ತಂತ್ರಗಳು ವಿಭಿನ್ನವಾಗಿದ್ದವು. ಅಲ್ಲದೆ ನನಗೆ ಐಪಿಎಲ್ ಹೊಸ ಅನುಭವವನ್ನೇ ನೀಡಿದೆ ಎಂದು ನವೀನ್ ಉಲ್ ಹಕ್ ತಿಳಿಸಿದ್ದಾರೆ.

ಇದೇ ವೇಳೆ ವಿರಾಟ್ ಕೊಹ್ಲಿ ಜೊತೆಗಿನ ವಾಗ್ವಾದದ ಕುರಿತು ಕೇಳಲಾಯಿತು. ಈ ವೇಳೆ ಮಾತನಾಡಿದ ನವೀನ್, ಅಂತಹ ಘಟನೆಗಳೇ ನಡೆಯಬಾರದಿತ್ತು. ಆದರೆ ಪಂದ್ಯದ ವೇಳೆಯು, ಆನಂತರ ಜಗಳವನ್ನು ನಾನು ಶುರು ಮಾಡಿದ್ದಲ್ಲ.

ಮ್ಯಾಚ್ ಮುಗಿದ ಬಳಿಕ ಹಸ್ತಲಾಘವ ಮಾಡುವ ವೇಳೆಯೂ ವಿರಾಟ್ ಕೊಹ್ಲಿಯೇ ಮತ್ತೆ ಜಗಳ ಶುರು ಹಚ್ಚಿಕೊಂಡಿದ್ದರು. ನಾನು ಯಾವತ್ತೂ ಯಾರನ್ನೂ ಕೆಣಕುವ ಯತ್ನ ಮಾಡಿರಲಿಲ್ಲ. ಅಲ್ಲದೆ ಪಂದ್ಯದ ವೇಳೆ ಒಂದೇ ಒಂದು ಮಾತನ್ನೂ ಕೂಡ ಆಡಿರಲಿಲ್ಲ ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.

ನಾನು ಅಂಡರ್ 16 ಕ್ರಿಕೆಟ್ ಆಡುವಾಗಿಂದಲೂ ಯಾರನ್ನೂ ಮೈದಾನದಲ್ಲಿ ಕೆಟ್ಟದಾಗಿ ಬೈದಿಲ್ಲ. ಆದರೆ ನನ್ನನ್ನು ಯಾರಾದರೂ ಬೈದರೆ ಖಂಡಿತವಾಗಿಯೂ ಉತ್ತರ ನೀಡುತ್ತೇನೆ. ಅದು ದೊಡ್ಡ ಆಟಗಾರನಾಗಿರಲಿ, ಅಥವಾ ಸಣ್ಣ ಆಟಗಾರನಾಗಿರಲಿ. ನನ್ನನ್ನು ಬೈದರೆ ನಾನು ಸುಮ್ಮನಿರಲ್ಲ ಎಂದರು.

ಅಂದು ಪಂದ್ಯದ ಮುಗಿದ ಬಳಿಕ ವಿರಾಟ್ ಕೊಹ್ಲಿ ನನ್ನ ಕೈ ಹಿಡಿದು ಬಿಡದಿರುವ ಕಾರಣ ಅವರಿಂದ ನಾನು ಕೈ ಎಳೆದೆ. ಏಕೆಂದರೆ ನಾನು ಕೂಡ ಮನುಷ್ಯ. ನನಗೂ ಕೋಪ ಬರುತ್ತೆ. ಆದರೆ ಆ ಬಳಿಕ ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು.

ಇದಾದ ಬಳಿಕ ಹಲವು ಪಂದ್ಯಗಳ ವೇಳೆ ಅಭಿಮಾನಿಗಳು ನನ್ನನ್ನು ಟಾರ್ಗೆಟ್ ಮಾಡಿದ್ದರು. ಅಂದು ನಾನು 70-80 ಸಾವಿರ ಜನಕ್ಕೆ ಉತ್ತರ ಕೊಡಬೇಕಿತ್ತು. ಇದಕ್ಕಾಗಿ ನಾನು ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿದೆ. ಅಲ್ಲದೆ ಮುಂದೆ ಕೂಡ ಉತ್ತಮವಾಗಿ ಆಡಬಲ್ಲೆ ಎಂಬ ಭರವಸೆಯಿದೆ ಎಂದು ನವೀನ್ ಉಲ್ ತಿಳಿಸಿದ್ದಾರೆ.

ಇದೇ ವೇಳೆ ವಿವಾದವನ್ನು ಕೊನೆಗೊಳಿಸುವ ಬದಲು ನೀವೇಕೆ ಮತ್ತೆ ಮಾವಿನ ಹಣ್ಣಿನ ಫೋಟೋದೊಂದಿಗೆ ಕಿಚಾಯಿಸಲು ಯತ್ನಿಸಿದ್ದೀರಿ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ನವೀನ್ ಉಲ್ ಹಕ್, ಅಲ್ಲಿ ನಾನು ಯಾವುದೇ ಆಟಗಾರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ನಾನು ಪಂದ್ಯ ವೀಕ್ಷಿಸುತ್ತಾ ಮಾವಿನ ಹಣ್ಣನ್ನು ತಿನ್ನುತ್ತಿರುವ ಫೋಟೋ ಹಾಕಿದ್ದೆ ಅಷ್ಟೇ. ಆದರೆ ಅದು ಸೋಷಿಯಲ್ ಮೀಡಿಯಾದಲ್ಲಿ ಚರ್ಚಾ ವಿಷಯವಾಯಿತು ಎಂದರು.

ಒಂದು ವೇಳೆ ಇದೇ ಮಾದರಿಯ ಘಟನೆ ಮತ್ತೆ ನಡೆದರೆ ನಿಮ್ಮ ಪ್ರತಿಕ್ರಿಯೆ ಹೇಗಿರಲಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ನವೀನ್, ಡೌಟೇ ಬೇಡ...ಇದೇ ರೀತಿಯಲ್ಲೇ ಇರಲಿದೆ. ನನ್ನನ್ನು ಕೆಣಕಿದವರಿಗೆ ನಾನು ನಾನು ಇದೇ ಮಾದರಿಯಲ್ಲಿ ಉತ್ತರ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಸದ್ಯ ಕಿಂಗ್ ಕೊಹ್ಲಿ ಅಭಿಮಾನಿಗಳು ಏಷ್ಯಾಕಪ್ನಲ್ಲಿ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ನಡುವಣ ಮುಖಾಮುಖಿಯನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ನಲ್ಲಿ ನವೀನ್ ಉಲ್ ಹಕ್ ಎಸೆತಗಳಿಗೆ ವಿರಾಟ್ ಕೊಹ್ಲಿ ಹೇಗೆ ಉತ್ತರ ನೀಡಲಿದ್ದಾರೆ ಎಂಬುದೇ ಈಗ ಕುತೂಹಲ.




