
IPL 2025: ಟಿ20 ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಪ್ಯಾಟ್ ಕಮಿನ್ಸ್ (Pat Cummins) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಸಹ ಪವರ್ಪ್ಲೇನಲ್ಲಿ ಪವರ್ಫುಲ್ ದಾಳಿ ಸಂಘಟಿಸುವ ಮೂಲಕ ಎಂಬುದು ವಿಶೇಷ. ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸ್ಆರ್ಹೆಚ್ ತಂಡ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೊದಲ ಎಸೆತದಲ್ಲೇ ಪ್ಯಾಟ್ ಕಮಿನ್ಸ್ ಆಘಾತ ನೀಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನಿಂಗ್ಸ್ನ ಮೊದಲ ಎಸೆತದಲ್ಲೇ ಕರುಣ್ ನಾಯರ್ ವಿಕೆಟ್ ಕಬಳಿಸಿ ಕಮಿನ್ಸ್ ಎಸ್ಆರ್ಹೆಚ್ ತಂಡಕ್ಕೆ ಶುಭಾರಂಭ ನೀಡಿದ್ದರು.

ಇದಾದ ಬಳಿಕ 3ನೇ ಓವರ್ನಲ್ಲಿ ಮರಳಿದ ಪ್ಯಾಟ್ ಕಮಿನ್ಸ್, ಮೊದಲ ಎಸೆತದಲ್ಲೇ ಫಾಫ್ ಡುಪ್ಲೆಸಿಸ್ ವಿಕೆಟ್ ಕಬಳಿಸಿದರು. ಆ ಬಳಿಕ 5ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ಕಮಿನ್ಸ್, ಮೊದಲ ಬಾಲ್ನಲ್ಲೇ ಅಭಿಷೇಕ್ ಪೊರೆಲ್ ವಿಕೆಟ್ ಪಡೆದರು. ಈ ಮೂಲಕ ಪವರ್ಪ್ಲೇನಲ್ಲಿ ಎಸೆದ ಮೂರು ಓವರ್ಗಳ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದರು.

ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬೌಲರ್ ಪವರ್ಪ್ಲೇನಲ್ಲಿ ಎಸೆದ ತನ್ನೆಲ್ಲಾ ಓವರ್ನ ಮೊದಲ ಎಸೆತದಲ್ಲಿ ವಿಕೆಟ್ ಕಬಳಿಸಿರಲಿಲ್ಲ. ಇದೀಗ ಪ್ಯಾಟ್ ಕಮಿನ್ಸ್ ತನ್ನ ಮೂರು ಓವರ್ನ ಮೊದಲ ಎಸೆತಗಳಲ್ಲಿ ವಿಕೆಟ್ ಪಡೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅಷ್ಟೇ ಅಲ್ಲದೆ ಐಪಿಎಲ್ನ ಇತಿಹಾಸದಲ್ಲೂ ಪವರ್ಪ್ಲೇನಲ್ಲಿ ಮೂರು ವಿಕೆಟ್ ಕಬಳಿಸಿದ ಮೊದಲ ಕ್ಯಾಪ್ಟನ್ ಎಂಬ ದಾಖಲೆಯನ್ನು ಸಹ ಪ್ಯಾಟ್ ಕಮಿನ್ಸ್ ತನ್ನದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅಕ್ಷರ್ ಪಟೇಲ್ ಹಾಗೂ ಝಹೀರ್ ಖಾನ್ ತಲಾ 2 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಪ್ಯಾಟ್ ಕಮಿನ್ಸ್ ಮುರಿದಿದ್ದಾರೆ.