IPL 2025: ತಂತ್ರನಾ ಕುತಂತ್ರನಾ… ಮುಂದಿನ ಸೀಸನ್‌ಗಾಗಿ CSK ಪ್ಲ್ಯಾನ್?
IPL 2025 CSK: ಈ ಬಾರಿಯ ಐಪಿಎಲ್ನಲ್ಲಿ 5 ಬಾರಿಯ ಚಾಂಪಿಯನ್ ಸಿಎಸ್ಕೆ ತಂಡವು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಈವರೆಗೆ ಆಡಿದ 11 ಪಂದ್ಯಗಳಲ್ಲಿ 9 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನು ಗೆದ್ದಿರುವುದು ಕೇವಲ 2 ಮ್ಯಾಚ್ಗಳಲ್ಲಿ ಮಾತ್ರ. ಈ ಮೂಲಕ ಸಿಎಸ್ಕೆ ತಂಡ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
Updated on: May 06, 2025 | 8:54 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಿಂದ ಚೆನ್ಣೈ ಸೂಪರ್ ಕಿಂಗ್ಸ್ (CSK) ತಂಡವು ಈಗಾಗಲೇ ಹೊರಬಿದ್ದಿದೆ. ಆಡಿದ 11 ಪಂದ್ಯಗಳಲ್ಲಿ ಸಿಎಸ್ಕೆ ತಂಡ ಜಯ ಸಾಧಿಸಿದ್ದು ಕೇವಲ 2 ಮ್ಯಾಚ್ಗಳಲ್ಲಿ ಮಾತ್ರ. ಈ ಸೋಲುಗಳ ನಡುವೆ ನಾವು ಮುಂದಿನ ಸೀಸನ್‌ಗಾಗಿ ಸರಿಯಾದ ಸಂಯೋಜನೆ ರೂಪಿಸುತ್ತಿದ್ದೇವೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿಕೆಯೊಂದನ್ನು ನೀಡಿದ್ದರು.

ಈ ಹೇಳಿಕೆಯೊಂದಿಗೆ ಸಿಎಸ್ಕೆ ತಂಡವು ಮುಂದಿನ ಸೀಸನ್‌ಗಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಚೆನ್ನೈ ಪಡೆ ಈ ಬಾರಿಯ ಐಪಿಎಲ್ ನಡುವೆ ಮೂರು ಬದಲಾವಣೆ ಮಾಡಿಕೊಂಡಿದೆ. ಅಂದರೆ ಗಾಯಗೊಂಡ ಆಟಗಾರರ ಬದಲಿಯಾಗಿ ಮೂವರನ್ನು ಆಯ್ಕೆ ಮಾಡಿಕೊಂಡಿದೆ.

ಈ ಮೂವರಲ್ಲಿ ಇಬ್ಬರು ಈಗಾಗಲೇ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದರೆ ಸಿಎಸ್ಕೆ ತಂಡವು ಬೆಂಚ್ ಕಾಯುತ್ತಿರುವ ಆಟಗಾರರ ಬದಲಿಗೆ, ಬದಲಿಯಾಗಿ ಆಯ್ಕೆಯಾದ ಆಟಗಾರರನ್ನು ಕಣಕ್ಕಿಳಿಸುತ್ತಿದ್ದಾರೆ. ಹೀಗಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಗಾಯದ ನೆಪದೊಂದಿಗೆ ಮುಂದಿನ ಸೀಸನ್‌ಗಾಗಿ ಪ್ಲ್ಯಾನ್ ರೂಪಿಸುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ರುತುರಾಜ್ ಗಾಯಕ್ವಾಡ್ ಬದಲಿಗೆ ಆಯ್ಕೆಯಾದ ಆಯುಷ್ ಮ್ಹಾತ್ರೆ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲಾಗಿತ್ತು. ಅತ್ತ ರಚಿನ್ ರವೀಂದ್ರ, ಡೆವೊನ್ ಕಾನ್ವೆಯಂತಹ ಸ್ಟಾರ್ ಆರಂಭಿಕರಿದ್ದರೂ ಸಿಎಸ್ಕೆ ಫ್ರಾಂಚೈಸಿ ಟೂರ್ನಿ ನಡುವೆ ಆಯ್ಕೆಯಾದ ಆಯುಷ್ಗೆ ಮಣೆ ಹಾಕಿದ್ದು ಅಚ್ಚರಿಗೆ ಕಾರಣವಾಗಿತ್ತು.

ತಂಡದಲ್ಲಿದ್ದ ವೇಗಿ ಗುರ್ಜಪ್ನೀತ್ ಸಿಂಗ್ ಗಾಯಗೊಂಡು ಹೊರಬಿದ್ದ ಬೆನ್ನಲ್ಲೇ ಸಿಎಸ್ಕೆ ತಂಡ ಆಯ್ಕೆ ಮಾಡಿಕೊಂಡಿದ್ದು ಡೆವಾಲ್ಡ್ ಬ್ರೆವಿಸ್ ಅವರನ್ನು. ಅಂದರೆ ಭಾರತೀಯ ಆಟಗಾರನ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗನನ್ನು ಕರೆತಂದಿದ್ದರು. ಅಲ್ಲದೆ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಬ್ರೆವಿಸ್ ಪ್ಲೇಯಿಂಗ್ ಇಲೆವೆನ್ನಲ್ಲೂ ಸ್ಥಾನ ಪಡೆದಿದ್ದರು. ಅಂದರೆ ಸಿಎಸ್ಕೆ ತಂಡದಲ್ಲಿ ವಿದೇಶಿ ಆಟಗಾರರು ಬೆಂಚ್ ಕಾಯುತ್ತಿದ್ದರೂ, ಅವರನ್ನು ಸೈಡ್ಗಿರಿಸಿ ಡೆವಾಲ್ಡ್ ಬ್ರೆವಿಸ್ಗೆ ಅವಕಾಶ ನೀಡಲಾಗಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದೀಗ ಸಿಎಸ್ಕೆ ತಂಡದಲ್ಲಿದ್ದ ವಿಕೆಟ್ ಕೀಪರ್ ಬ್ಯಾಟರ್ ವಂಶ್ ಬೇಡಿ ಸಹ ಗಾಯಗೊಂಡು ಹೊರಬಿದ್ದಿದ್ದಾರೆ. ಅವರ ಬದಲಿಗೆ ದೇಶೀಯ ಅಂಗಳದ ಸ್ಪೋಟಕ ದಾಂಡಿಗ ಉರ್ವಿಲ್ ಪಟೇಲ್ ಅವರನ್ನು ಕರೆ ತರಲಾಗಿದೆ. ಇತ್ತ ಸಿಎಸ್ಕೆ ತಂಡಕ್ಕೆ ಉಳಿದಿರುವುದು ಕೇವಲ 3 ಮ್ಯಾಚ್ಗಳು ಮಾತ್ರ. ಅಲ್ಲದೆ ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಇಂತಹ ಸಮಯದಲ್ಲಿ ಬದಲಿ ಆಟಗಾರನ ಆಯ್ಕೆ ಮಾಡಿಕೊಂಡಿದ್ದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಬದಲಿಯಾಗಿ ಬಂದ ಆಟಗಾರರನ್ನು ಮುಂದಿನ ಸೀಸನ್‌ಗಾಗಿ ತಂಡದಲ್ಲೇ ಉಳಿಸಿಕೊಳ್ಳಬಹುದು ಎಂಬುದನ್ನು. ಅಂದರೆ ಸಿಎಸ್ಕೆ ತಂಡವು ಮುಂದಿನ ಸೀಸನ್ಗೂ ಮುನ್ನ ತಂಡದಲ್ಲಿರುವ ಕೆಲ ಆಟಗಾರರನ್ನು ಗಾಯದ ನೆಪದೊಂದಿಗೆ ಹೊರಹಾಕುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ತಂಡದಲ್ಲಿರುವ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ ಎಂಬುದು ಈಗಾಗಲೇ ಜಗ್ಗಜ್ಜಾಹೀರಾಗಿದೆ. ಅಲ್ಲದೆ ಈ ಬಾರಿ ಸಿಎಸ್ಕೆ ಫ್ರಾಂಚೈಸಿ ಖರೀದಿಸಿದ ಯುವ ಆಟಗಾರರಲ್ಲಿ ಭರ್ಜರಿ ಪ್ರದರ್ಶನ ನೀಡುವ ಸಾಮರ್ಥ್ಯವಿಲ್ಲ ಎಂಬುದು ಅರಿವಾಗಿರುವ ಸಾಧ್ಯತೆಯಿದೆ. ಇದೇ ಕಾರಣದಿಂದಾಗಿ ಸಿಎಸ್ಕೆ ತಂಡವು ಗಾಯದ ಬೆನ್ನಲ್ಲೇ ಸ್ಪೋಟಕ ದಾಂಡಿಗರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಈ ಆಟಗಾರರನ್ನು ಮುಂದಿನ ಸೀಸನ್‌ಗಾಗಿ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಮಿನಿ ಹರಾಜಿಗೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅತ್ಯುತ್ತಮ ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ಲ್ಯಾನ್ ರೂಪಿಸಿದಂತಿದೆ. ಇದಕ್ಕೆ ಸಾಕ್ಷಿ ಬೌಲರ್ ಬದಲಿಗೆ ಡೆವಾಲ್ಡ್ ಬ್ರೆವಿಸ್ ಎಂಬ ಸ್ಪೋಟಕ ದಾಂಡಿಗ ಎಂಟ್ರಿ ಕೊಟ್ಟಿರುವುದು. ಹಾಗೆಯೇ ಬದಲಿಯಾಗಿ ಬಂದ ಆಯುಷ್ ಮ್ಹಾತ್ರೆ ಒಮ್ಮೆಲ್ಲೆ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿರುವುದು.

ಇದೀಗ ಕೇವಲ 3 ಪಂದ್ಯಗಳು ಮಾತ್ರ ಉಳಿದಿರುವಾಗ ದೇಶೀಯ ಅಂಗಳದ ಸ್ಪೋಟಕ ಬ್ಯಾಟರ್ ಉರ್ವಿಲ್ ಪಟೇಲ್ ಅವರನ್ನು ಸಿಎಸ್ಕೆ ತಂಡ ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 2026ರ ಮಿನಿ ಹರಾಜಿಗೂ ಮುನ್ನವೇ ಮೂವರು ಸ್ಪೋಟಕ ದಾಂಡಿಗರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಂತಾಗಿದೆ. ಹೀಗಾಗಿಯೇ ಐಪಿಎಲ್ 2026 ಕ್ಕಾಗಿ ಸಿಎಸ್ಕೆ ಫ್ರಾಂಚೈಸಿ ತೆರೆಮರೆಯಲ್ಲೇ ಪ್ಲ್ಯಾನ್ ರೂಪಿಸುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



