ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿನಲ್ಲಿ ಬಿಕರಿಯಾಗದೇ ಉಳಿದ ಸ್ಟಾರ್ ಆಟಗಾರರಲ್ಲಿ ಡೇವಿಡ್ ವಾರ್ನರ್ ಕೂಡ ಒಬ್ಬರು. 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದ ವಾರ್ನರ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇತ್ತ ಐಪಿಎಲ್ನಲ್ಲಿ ಅವಕಾಶ ಕೈ ತಪ್ಪುತ್ತಿದ್ದಂತೆ ವಾರ್ನರ್ ಪಿಎಸ್ಎಲ್ನತ್ತ ಮುಖ ಮಾಡಿದ್ದರು.
ಅದರಂತೆ ಪಾಕಿಸ್ತಾನ್ ಸೂಪರ್ ಲೀಗ್ ಸೀಸನ್-10 ರ ಡ್ರಾಫ್ಟ್ನಲ್ಲಿ ಕಾಣಿಸಿಕೊಂಡಿದ್ದ ಡೇವಿಡ್ ವಾರ್ನರ್ ಅವರನ್ನು ಕರಾಚಿ ಕಿಂಗ್ಸ್ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ. ಅಲ್ಲದೆ ಇದೀಗ ವಾರ್ನರ್ ಅವರಿಗೆ ಕರಾಚಿ ಕಿಂಗ್ಸ್ ತಂಡದ ನಾಯಕತ್ವವನ್ನು ಸಹ ನೀಡಲಾಗಿದೆ.
ಇನ್ನು ಕರಾಚಿ ಕಿಂಗ್ಸ್ ತಂಡದಲ್ಲಿ ಡೇವಿಡ್ ವಾರ್ನರ್ ಅವರೊಂದಿಗೆ ಕೇನ್ ವಿಲಿಯಮ್ಸನ್ ಅವರು ಸಹ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ವಾರ್ನರ್ ಆಟಗಾರನಾಗಿ ಕಣಕ್ಕಿಳಿದರೆ, ವಿಲಿಯಮ್ಸನ್ ಹೆಚ್ಚುವರಿ ಆಟಗಾರನಾಗಿ ತಂಡದಲ್ಲಿ ಇರಲಿದ್ದಾರೆ. ಅಂದರೆ ಯಾವುದಾದರೂ ಆಟಗಾರ ಹೊರಗುಳಿದರೆ ಕೇನ್ ವಿಲಿಯಮ್ಸನ್ಗೆ ಅವಕಾಶ ದೊರೆಯಲಿದೆ.
ವಿಶೇಷ ಎಂದರೆ ಈ ಹಿಂದೆ ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ ಐಪಿಎಲ್ನಲ್ಲಿ ಜೊತೆಯಾಗಿ ಆಡಿದ್ದರು. 2015 ರಿಂದ 2020 ರವರೆಗೆ ಸನ್ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಈ ಜೋಡಿಯು ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕರಾಚಿ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲು ಇಬ್ಬರು ದಿಗ್ಗಜರು ಸಜ್ಜಾಗಿದ್ದಾರೆ.
ಕರಾಚಿ ಕಿಂಗ್ಸ್ ತಂಡ: ಡೇವಿಡ್ ವಾರ್ನರ್ (ನಾಯಕ), ಆ್ಯಡಂ ಮಿಲ್ನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಹಸನ್ ಅಲಿ, ಜೇಮ್ಸ್ ವಿನ್ಸ್, ಖುಶ್ದಿಲ್ ಶಾ, ಅಮೀರ್ ಜಮಾಲ್, ಮುಹಮ್ಮದ್ ಇರ್ಫಾನ್ ಖಾನ್, ಶಾನ್ ಮಸೂದ್, ಅರಾಫತ್ ಮಿನ್ಹಾಸ್, ಲಿಟ್ಟನ್ ದಾಸ್, ಮೀರ್ ಹಮ್ಝ, ಟಿಮ್ ಸೀಫರ್ಟ್, ಝಾಹಿದ್ ಮೆಹಮೂದ್, ಫವಾದ್ ಅಲಿ, ರಿಯಾಜುಲ್ಲಾ. ಪೂರಕ ಆಟಗಾರರು: ಕೇನ್ ವಿಲಿಯಮ್ಸನ್, ಮೊಹಮ್ಮದ್ ನಬಿ, ಒಮೈರ್ ಬಿನ್ ಯೂಸುಫ್, ಮಿರ್ಝ ಮಾಮೂನ್.