ಚಾಂಪಿಯನ್ಸ್ ಟ್ರೋಫಿಯ 6ನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ನ್ಯೂಝಿಲೆಂಡ್ ಬ್ಯಾಟರ್ ರಚಿನ್ ರವೀಂದ್ರ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ರಾವಲ್ಪಿಂಡಿಯಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು.
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡದ ಪರ ನಾಯಕ ನಜ್ಮುಲ್ ಹೊಸೈನ್ ಶಾಂತೊ (77) ಅರ್ಧಶತಕ ಬಾರಿಸಿ ಮಿಂಚಿದರು. ಈ ಅರ್ಧಶತಕದ ನೆರವಿನಿಂದ ಬಾಂಗ್ಲಾದೇಶ್ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 236 ರನ್ ಕಲೆಹಾಕಿತು.
237 ರನ್ಗಳ ಗುರಿ ಸುಲಭ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 15 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಿವೀಸ್ ಪಡೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ರಚಿನ್ ರವೀಂದ್ರ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಈ ಇನಿಂಗ್ಸ್ನಲ್ಲಿ 105 ಎಸೆತಗಳನ್ನು ಎದುರಿಸಿದ ರಚಿನ್ ರವೀಂದ್ರ 1 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 112 ರನ್ ಬಾರಿಸಿದರು. ಈ ಶತಕದೊಂದಿಗೆ ಯುವ ಎಡಗೈ ದಾಂಡಿಗ ಹಲವು ದಾಖಲೆಗಳನ್ನು ಬರೆದರು. ಅಷ್ಟೇ ಅಲ್ಲದೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶೇಷ ವಿಶ್ವ ದಾಖಲೆಯನ್ನು ಸಹ ಮುರಿದರು.
ಹೌದು, ಐಸಿಸಿ ಟೂರ್ನಿಯಲ್ಲಿ ಇದು ರಚಿನ್ ರವೀಂದ್ರ ಅವರ 4ನೇ ಶತಕ. ಇದರೊಂದಿಗೆ 25 ವಯಸ್ಸಿನೊಳಗೆ ಐಸಿಸಿ ಟೂರ್ನಿಯಲ್ಲಿ ಅತ್ಯಧಿಕ ಶತಕ ಸಿಡಿಸಿದ ದಾಖಲೆ ರಚಿನ್ ರವೀಂದ್ರ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.
ಸಚಿನ್ 25 ವಯಸ್ಸಿನೊಳಗೆ ಐಸಿಸಿ ಟೂರ್ನಿಯಲ್ಲಿ ಒಟ್ಟು 3 ಶತಕ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಮಾಸ್ಟರ್ ಬ್ಲಾಸ್ಟರ್ ಹೆಸರಿನಲ್ಲಿದ್ದ ವಿಶೇಷ ವಿಶ್ವ ದಾಖಲೆಯನ್ನು ಮುರಿದು ರಚಿನ್ ರವೀಂದ್ರ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಹಾಗೆಯೇ ಚೊಚ್ಚಲ ಏಕದಿನ ವಿಶ್ವಕಪ್ ಪಂದ್ಯ ಹಾಗೂ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೂ ರಚಿನ್ ರವೀಂದ್ರ ಪಾತ್ರರಾಗಿದ್ದಾರೆ. ಇದರ ಜೊತೆಗೆ ಐಸಿಸಿ ಟೂರ್ನಿಯಲ್ಲಿ ನ್ಯೂಝಿಲೆಂಡ್ ಪರ ಅತ್ಯಧಿಕ ಸೆಂಚುರಿ ಸಿಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಕೇನ್ ವಿಲಿಯಮ್ಸನ್ (3 ಶತಕ) ಹೆಸರಿನಲ್ಲಿತ್ತು. ಇದೀಗ ಈ ದಾಖಲೆ ಮುರಿದು ರಚಿನ್ ರವೀಂದ್ರ (4 ಶತಕ) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಾಗೆಯೇ ನ್ಯೂಝಿಲೆಂಡ್ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ರಚಿನ್ ರವೀಂದ್ರ ಪಾತ್ರರಾಗಿದ್ದಾರೆ.