- Kannada News Photo gallery Cricket photos Rachin Ravindra, Devon Conway, and Henry Nicholls Creates New World Record
ಟೆಸ್ಟ್ ಕ್ರಿಕೆಟ್ನಲ್ಲಿ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ ತ್ರಿಮೂರ್ತಿಗಳು
Zimbabwe vs New Zealand: ನ್ಯೂಝಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡವು ಪ್ರಥಮ ಇನಿಂಗ್ಸ್ನಲ್ಲಿ ಕೇವಲ 125 ರನ್ಗಳಿಗೆ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ 601 ರನ್ಗಳಿಸಿ ಡಿಕ್ಲೇರ್ ಘೋಷಿಸಿತು. ಆ ಬಳಿಕ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಝಿಂಬಾಬ್ವೆ ತಂಡವು 117 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ನ್ಯೂಝಿಲೆಂಡ್ ಇನಿಂಗ್ಸ್ ಹಾಗೂ 359 ರನ್ಗಳ ಭರ್ಜರಿ ಜಯ ಸಾಧಿಸಿದೆ.
Updated on: Aug 10, 2025 | 8:05 AM

ಝಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ರಚಿನ್ ರವೀಂದ್ರ, ಡೆವೊನ್ ಕಾನ್ವೆ ಹಾಗೂ ಹೆನ್ರಿ ನಿಕೋಲ್ಸ್ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಈ ಹಿಂದೆ ಕೇವಲ 6 ಬ್ಯಾಟರ್ಗಳು ಮಾತ್ರ ನಿರ್ಮಿಸಿದ್ದ ವರ್ಲ್ಡ್ ರೆಕಾರ್ಡ್ ಅನ್ನು ಸರಿಗಟ್ಟುವ ಮೂಲಕ. ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 3 ಇನಿಂಗ್ಸ್ನಲ್ಲಿ ಮಾತ್ರ ಮೂವರು ಬ್ಯಾಟರ್ಗಳು 150+ ರನ್ ಗಳಿಸಿದ್ದಾರೆ.

ಈ ಪಟ್ಟಿಗೆ ಹೊಸ ಸೇರ್ಪಡೆ ರಚಿನ್ ರವೀಂದ್ರ, ಡೆವೊನ್ ಕಾನ್ವೆ, ಹೆನ್ರಿ ನಿಕೋಲ್ಸ್. ಬುಲವಾಯೊದಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಡೆವೊನ್ ಕಾನ್ವೆ 153 ರನ್ ಬಾರಿಸಿದರೆ, ಆ ಬಳಿಕ ಬಂದ ಹೆನ್ರಿ ನಿಕೋಲ್ಸ್ 150 ರನ್ ಚಚ್ಚಿದ್ದರು. ಇನ್ನು ರಚಿನ್ ರವೀಂದ್ರ ಕೇವಲ 139 ಎಸೆತಗಳಲ್ಲಿ 165 ರನ್ ಬಾರಿಸಿದ್ದರು.

ಈ ಮೂಲಕ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್ನಲ್ಲಿ 150+ ರನ್ಗಳಿಸಿದ ನ್ಯೂಝಿಲೆಲೆಂಡ್ನ ಮೊದಲ ತ್ರಿಮೂರ್ತಿಗಳೆನಿಸಿಕೊಂಡರು. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ ಮೂರನೇ ತ್ರಿಮೂರ್ತಿಗಳೆಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾ ದಾಂಡಿಗರು ಈ ಸಾಧನೆ ಮಾಡಿದ್ದರು.

1938 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ಗಳಾದ ಲಿಯನಾರ್ಡೊ ಹಟನ್ 364 ರನ್ ಬಾರಿಸಿದರೆ, ಮೌರಿಸ್ ಲೇಲ್ಯಾಂಡ್ 167 ರನ್ಗಳಿಸಿದ್ದರು. ಇನ್ನು ಜೋ ಹಾರ್ಡ್ಸ್ಟಾಪ್ ಅಜೇಯ 169 ರನ್ ಗಳಿಸಿದ್ದರು. ಈ ಮೂಲಕ ಟೆಸ್ಟ್ ಇತಿಹಾಸದ ಒಂದೇ ಇನಿಂಗ್ಸ್ನಲ್ಲಿ 150+ ರನ್ಗಳಿಸಿದ ವಿಶ್ವದ ಮೊದಲ ಮೂವರು ಬ್ಯಾಟರ್ಗಳು ಎನಿಸಿಕೊಂಡಿದ್ದರು.

ಇದಾದ ಬಳಿಕ ಈ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾದ ತ್ರಿಮೂರ್ತಿಗಳು ಸರಿಗಟ್ಟಿದ್ದರು. 1986 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊಹಮ್ಮದ್ ಅಝರುದ್ದೀನ್ 199 ರನ್ ಬಾರಿಸಿದರೆ, ಸುನಿಲ್ ಗವಾಸ್ಕರ್ 176 ರನ್ಗಳಿಸಿದ್ದರು. ಇನ್ನು ಕಪಿಲ್ ದೇವ್ 163 ರನ್ಗಳಿಸಿ ಮಿಂಚಿದ್ದರು. ಈ ಮೂಲಕ ಇಂಗ್ಲೆಂಡ್ ದಾಂಡಿಗರು ನಿರ್ಮಿಸಿದ್ದ ವಿಶೇಷ ವಿಶ್ವ ದಾಖಲೆಯನ್ನು ಅಝರ್, ಗವಾಸ್ಕರ್, ಕಪಿಲ್ ದೇವ್ ಸರಿಗಟ್ಟಿದ್ದರು.

ಇದೀಗ ರಚಿನ್ ರವೀಂದ್ರ (165), ಡೆವೊನ್ ಕಾನ್ವೆ (153) ಹಾಗೂ ಹೆನ್ರಿ ನಿಕೋಲ್ಸ್ (150) ಝಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 150+ ರನ್ಗಳಿಸುವ ಈ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ನ್ಯೂಝಿಲೆಂಡ್ನ ಮೊದಲ ತ್ರಿಮೂರ್ತಿಗಳೆಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.




