
ರಣಜಿ ಟೂರ್ನಿಯಲ್ಲಿ ಯುವ ಆಟಗಾರರ ಸಿಡಿಲಬ್ಬರದ ಮುಂದುವರೆದಿದೆ. ಒಂದೆಡೆ ಹಿರಿಯ ಆಟಗಾರ ಮನೀಷ್ ಪಾಂಡೆ ಸ್ಪೋಟಕ ದ್ವಿಶತಕ ಬಾರಿಸಿ ಮಿಂಚಿದರೆ, ಮತ್ತೊಂದೆಡೆ ಯುವ ಆಟಗಾರ ರಿಯಾನ್ ಪರಾಗ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಗ್ರೂಪ್-ಬಿನಲ್ಲಿ ನಡೆದ ಹೈದಾರಾಬಾದ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಸ್ಸಾಂ ತಂಡವು ಮೊದಲ ಇನಿಂಗ್ಸ್ನಲ್ಲಿ 205 ರನ್ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಹೈದರಾಬಾದ್ ತಂಡ 208 ರನ್ಗಳಿಸಲಷ್ಟೇ ಶಕ್ತರಾದರು. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಅಸ್ಸಾಂ ಪರ ರಿಯಾನ್ ಅಕ್ಷರಶಃ ಅಬ್ಬರಿಸಿದರು.

ಅಸ್ಸಾಂ ತಂಡವು 29 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕಣಕ್ಕಿಳಿದ ರಿಯಾನ್ ಪರಾಗ್ ಸ್ಪೋಟಕ ಇನಿಂಗ್ಸ್ ಆಡಿದರು. ಹೈದರಾಬಾದ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಯುವ ಆಟಗಾರ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ರಿಯಾನ್ ಬ್ಯಾಟ್ನಿಂದ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳು ಮೂಡಿಬಂತು.

ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಿಯಾನ್ ಪರಾಗ್, ಆ ಬಳಿಕ ಸಿಡಿಲಬ್ಬರ ಮುಂದುವರೆಸಿದರು. ಅದರಂತೆ 28 ಎಸೆತಗಳಲ್ಲಿ 78 ರನ್ ಬಾರಿಸುವ ಮೂಲಕ ಕ್ಷಣಾರ್ಧದಲ್ಲಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಹಂತದಲ್ಲಿ ರವಿತೇಜ ಎಸೆತಕ್ಕೆ ಭರ್ಜರಿ ಉಗತ್ತರ ನೀಡಲು ಯತ್ನಿಸಿದ ರಿಯಾನ್ (78) ಕ್ಯಾಚ್ ಔಟ್ ಆಗಿ ನಿರ್ಗಮಿಸಿದರು. ಆದರೆ ಅಷ್ಟರಲ್ಲಾಗಲೇ ತಂಡದ ಮೊತ್ತವು 19.2 ಓವರ್ನಲ್ಲಿ 130 ಕ್ಕೆ ಬಂದು ನಿಂತಿತ್ತು.

ಇದಕ್ಕೂ ಮುನ್ನ ವಿಜಯ್ ಹಜಾರೆ ಟ್ರೋಫಿಯ ಆರಂಭಿಕ ಪಂದ್ಯದ ವೇಳೆ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಕೇವಲ 116 ಎಸೆತಗಳಲ್ಲಿ 12 ಫೋರ್ ಹಾಗೂ 12 ಸಿಕ್ಸರ್‌ಗಳೊಂದಿಗೆ ರಿಯಾನ್ 174 ರನ್ ಚಚ್ಚಿದ್ದರು. ಇದೀಗ ಮತ್ತೊಮ್ಮೆ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸುವ ಸೂಚನೆ ನೀಡಿದ್ದಾರೆ.