
T20 ವಿಶ್ವಕಪ್ಗಾಗಿ ಅಫ್ಘಾನಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. ಸ್ಟಾರ್ ಆಟಗಾರರನ್ನು ಒಳಗೊಂಡಿದ್ದ ಈ ತಂಡವನ್ನು ಮ್ಯಾಜಿಕಲ್ ಸ್ಪಿನ್ನರ್ ರಶೀದ್ ಖಾನ್ ಮುನ್ನಡೆಸಲಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ತಂಡ ಪ್ರಕಟಗೊಂಡ ಬೆನ್ನಲ್ಲೇ ರಶೀದ್ ಖಾನ್ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹೌದು, ಅಫ್ಘಾನಿಸ್ತಾನ್ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಈ ಹಿಂದೆ ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಟಿ20 ವಿಶ್ವಕಪ್ಗಾಗಿ ತಂಡದ ಆಯ್ಕೆಯಲ್ಲಿ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ ನನ್ನ ಅಭಿಪ್ರಾಯವನ್ನು ಪರಿಗಣಿಸದೇ ಟೀಮ್ ಅನ್ನು ಅಂತಿಮಗೊಳಿಸಲಾಗಿದೆ. ಹೀಗಾಗಿ ಈ ತಂಡವನ್ನು ಮುನ್ನಡೆಸಲು ಇಚ್ಛಿಸುವುದಿಲ್ಲ ಎಂದು ರಶೀದ್ ಖಾನ್ ತಿಳಿಸಿದ್ದಾರೆ.

ಒಂದು ರಾಷ್ಟ್ರೀಯ ತಂಡದ ಆಯ್ಕೆಯ ವೇಳೆ ನಾಯಕನಾಗಿ ಆಯ್ಕೆಯ ಭಾಗವಾಗಲು ಹಕ್ಕು ಹೊಂದಿದ್ದೇನೆ. ಇದಾಗ್ಯೂ ನನ್ನ ಅಭಿಪ್ರಾಯಗಳನ್ನು ಪರಿಗಣಿಸದಿರುವುದು ವಿಷಾದನೀಯ. ಹೀಗಾಗಿ ನಾಯಕನ ಜವಾಬ್ದಾರಿಯಿಂದ ಕೆಳಗಿಯುತ್ತಿದ್ದೇನೆ. ಇದಾಗ್ಯೂ ಅಫ್ಘಾನಿಸ್ತಾನಕ್ಕಾಗಿ ಆಡುವುದು ನನಗೆ ಹೆಮ್ಮೆಯ ವಿಷಯ. ಹಾಗಾಗಿ ತಂಡದಲ್ಲಿ ಇರಲಿದ್ದೇನೆ ಎಂದು ರಶೀದ್ ಖಾನ್ ತಿಳಿಸಿದ್ದಾರೆ.

ಅತ್ತ ರಶೀದ್ ಖಾನ್ ನಾಯಕನ ಸ್ಥಾನದಿಂದ ಕೆಳಗಿಯುತ್ತಿದ್ದಂತೆ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ ತಂಡದ ಮತ್ತೋರ್ವ ಸ್ಟಾರ್ ಆಲ್ರೌಂಡರ್ ಆಟಗಾರ ಮೊಹಮ್ಮದ್ ನಬಿಗೆ ನಾಯಕನ ಸ್ಥಾನ ನೀಡಿದೆ. ಅದರಂತೆ ಟಿ20 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ್ ತಂಡವನ್ನು ಮೊಹ್ಮಮದ್ ನಬಿ ಮುನ್ನಡೆಸಲಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಅಫ್ಘಾನಿಸ್ತಾನ್ ತಂಡ ಹೀಗಿದೆ: ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಜ್, ಹಜರತುಲ್ಲಾ ಝಝೈ, ಉಸ್ಮಾನ್ ಘನಿ, ಅಸ್ಘರ್ ಅಫ್ಘಾನ್, ನಜೀಬುಲ್ಲಾ ಝದ್ರಾನ್, ಹಷ್ಮತುಲ್ಲಾ ಶಾಹಿದಿ, ಮೊಹಮ್ಮದ್ ಶಹಜಾದ್, ಮುಜೀಬ್ ಉರ್ ರೆಹಮಾನ್, ಕರೀಂ ಜನ್ನತ್, ಗುಲ್ಬುದ್ದೀನ್ ನೈಬ್, ನವೀನ್ -ಉಲ್-ಹಕ್, ಹಮೀದ್ ಹಸನ್, ದೌಲತ್ ಝದ್ರಾನ್, ಶರ್ಫುದ್ದೀನ್ ಅಶ್ರಫ್, ಶಪೂರ್ ಝದ್ರಾನ್, ಕೈಸ್ ಅಹ್ಮದ್. ಮೀಸಲು ಆಟಗಾರರು: ಅಫ್ಸರ್ ಝಝೈ, ಫರೀದ್ ಅಹ್ಮದ್ ಮಲಿಕ್.