
ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ಬೌಲಿಂಗ್‌ನಲ್ಲಿ ಒಳ್ಳೇಯ ಪ್ರದರ್ಶನ ನೀಡದಿರಬಹುದು. ಆದರೆ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಅವಶ್ಯಕವಿದ್ದಾಗ ಉತ್ತಮ ಕೊಡುಗೆ ನೀಡಿದ್ದಾರೆ. ಅಲ್ಲದೆ ಅರ್ಧಶತಕಗಳ ಇನ್ನಿಂಗ್ಸ್ ಕೂಡ ಆಡಿದ್ದಾರೆ.

ಇದೀಗ ಲಾರ್ಡ್ಸ್‌ನಲ್ಲಿ ನಡೆಯತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ 12 ಓವರ್ ಬೌಲ್ ಮಾಡಿದ ರವೀಂದ್ರ ಜಡೇಜಾ 29 ರನ್ ನೀಡಿ 1 ವಿಕೆಟ್ ಕೂಡ ಪಡೆದರು. ಓಲಿ ಪೋಪ್ ಅವರ ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಪಡೆಯುವ ಮೂಲಕ, ರವೀಂದ್ರ ಜಡೇಜಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಜಹೀರ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ.

ಜಡೇಜಾ ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 611 ವಿಕೆಟ್‌ಗಳನ್ನು ಕಬಳಿಸಿದ್ದರೆ, ಮಾಜಿ ವೇಗಿ ಜಹೀರ್ ಖಾನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 610 ವಿಕೆಟ್‌ಗಳನ್ನು ಪಡೆದಿದ್ದರು. ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅನಿಲ್ ಕುಂಬ್ಳೆ ಭಾರತದ ಪರ 956 ವಿಕೆಟ್ ಉರುಳಿಸಿದ್ದಾರೆ.

2012 ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಭಾರತೀಯ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ ರವೀಂದ್ರ ಜಡೇಜಾ ಇದುವರೆಗೆ 83 ಟೆಸ್ಟ್ ಪಂದ್ಯಗಳನ್ನಾಡಿದ್ದು ಒಟ್ಟು 3564 ರನ್‌ಗಳನ್ನು ಗಳಿಸಿದ್ದಾರೆ. ಇದಲ್ಲದೆ, ಅವರು 326 ವಿಕೆಟ್‌ಗಳನ್ನು ಕೂಡ ಕಬಳಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 231 ವಿಕೆಟ್‌ಗಳನ್ನು ಉರುಳಿಸಿರುವ ಜಡೇಜಾ, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 54 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ ಭಾರತ ಗೆದ್ದಿರುವ 2024 ರ ಟಿ20 ವಿಶ್ವಕಪ್ ಮತ್ತು 2025 ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಭಾಗವಾಗಿದ್ದರು.