
ನವೆಂಬರ್ 30 ರ ಭಾನುವಾರ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಶುಭ ಸಂಡೆಯಾಗಿತ್ತು. ಏಕೆಂದರೆ ಈ ದಿನದಂದು ನಡೆದ ಕ್ರಿಕೆಟ್ ಪಂದ್ಯಗಳಲ್ಲಿ ಆರ್‌ಸಿಬಿ ಆರು ಆಟಗಾರರು ಮಿಂಚಿನ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಂಡದ ಗೆಲುವಿನ ರೂವಾರಿಗಳಾಗಿದ್ದಾರೆ. ಹಾಗಿದ್ದರೆ ಆ 6 ಆಟಗಾರರು ಯಾರು? ಯಾವ್ಯಾವ ಪಂದ್ಯಗಳನ್ನು ಆಡಿದ್ದರು ಎಂಬುದರ ವಿವರ ಇಲ್ಲಿದೆ.

ಮೊದಲಿಗೆ ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆರ್ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಸಿಡಿಲಬ್ಬರದ ಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ ಕೊಹ್ಲಿ ಕೇವಲ 120 ಎಸೆತಗಳಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಿತ 135 ರನ್ ಬಾರಿಸಿದರು. ಹಾಗೆಯೇ ರೋಹಿತ್ ಶರ್ಮಾ ಅವರೊಂದಿಗೆ ಶತಕದ ಪಾಲುದಾರಿಕೆ ನಡೆಸಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು.

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದೇಶಿ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆರ್‌ಸಿಬಿ ನಾಯಕನಾಗಿರುವ ರಜತ್ ಪಾಟಿದರ್, ಮಧ್ಯಪ್ರದೇಶ ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 20 ಎಸೆತಗಳಲ್ಲಿ 43 ರನ್ ಚಚ್ಚಿದ ರಜತ್ ತಂಡದ ಗೆಲುವಿಗೆ ಕಾರಣರಾಗಿದ್ದಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಇದೇ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ವಿದರ್ಭ ತಂಡದ ಪರ ಕಣಕ್ಕಿಳಿದಿದ್ದ ಆರ್ಸಿಬಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ 19 ಎಸೆತಗಳಲ್ಲಿ 41 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಜಿತೇಶ್ ಅವರ ಈ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

ಇನ್ನು ಅಬುದಾಬಿಯಲ್ಲಿ ನಡೆದ ಅಬುದಾಬಿ ಟಿ10 ಲೀಗ್‌ನಲ್ಲಿ ಯುಎಇ ಬುಲ್ಸ್ ತಂಡದ ಪರ ಆಡಿದ್ದ ಆರ್ಸಿಬಿಯ ಮೂರು ಆಟಗಾರರಾದ ಫಿಲ್ ಸಾಲ್ಟ್, ಟಿಮ್ ಡೇವಿಡ್ ಹಾಗೂ ರೊಮಾರಿಯೊ ಶೆಫರ್ಡ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದರು. ಸಾಲ್ಟ್ 8 ಎಸೆತಗಳಲ್ಲಿ 18 ರನ್ ಬಾರಿಸಿದರೆ, ಟಿಮ್ ಡೇವಿಡ್ ಕೇವಲ 30 ಎಸೆತಗಳಲ್ಲಿ 98 ರನ್ ಚಚ್ಚಿದರು. ಶೆಫರ್ಡ್ಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಆದಾಗ್ಯೂ ಅವರು ಚಾಂಪಿಯನ್ ತಂಡದ ಭಾಗವಾಗಿದ್ದರು.