
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ (Rajat Patidar) 4 ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿಯಲಿದ್ದಾರೆ. ಸೌತ್ ಆಫ್ರಿಕಾ ಎ ವಿರುದ್ಧದ ಮೊದ ಟೆಸ್ಟ್ ಪಂದ್ಯದಲ್ಲಿ ಭಾರತ ಎ ಪರ ಕಣಕ್ಕಿಳಿದಿದ್ದ ಪಾಟಿದಾರ್ ಗಂಭೀರವಾಗಿ ಗಾಯಗೊಂಡಿದ್ದರು.

ಈ ಗಾಯದ ಪರಿಣಾಮ ರಜತ್ ಪಾಟಿದಾರ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಅವರ ಗಾಯದ ಕುರಿತಾದ ವೈದ್ಯಕೀಯ ವರದಿ ಬಂದಿದ್ದು, ಈ ರಿಪೋರ್ಟ್ನಲ್ಲಿ ಗಾಯವು ಗಂಭೀರವೆಂದು ಕಂಡು ಬಂದಿದೆ. ಹೀಗಾಗಿ ಚಿಕಿತ್ಸೆ ನಿಮಿತ್ತ ಅವರು ನಾಲ್ಕು ತಿಂಗಳುಗಳ ಕಾಲ ಮೈದಾನದಿಂದ ಹೊರುಗಳಿಯಲಿದ್ದಾರೆ.

ಇತ್ತ ನಾಲ್ಕು ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿಯುತ್ತಿರುವುದರಿಂದ ಅವರು ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಮಧ್ಯ ಪ್ರದೇಶ್ ಪರ ಕಣಕ್ಕಿಳಿಯಲಾಗುವುದಿಲ್ಲ. ಅಲ್ಲದೆ ನವೆಂಬರ್ ಅಂತ್ಯದಲ್ಲಿ ನಡೆಯಲಿರುವ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಿಂದಲೂ ಹೊರಗುಳಿಯಲಿದ್ದಾರೆ.

ಇನ್ನು ಡಿಸೆಂಬರ್ನಲ್ಲಿ ಪ್ರಾರಂಭವಾಗಲಿರುವ ವಿಜಯ ಹಝಾರೆ ಟೂರ್ನಿಗೂ ರಜತ್ ಪಾಟಿದಾರ್ ಅಲಭ್ಯರಾಗಲಿದ್ದಾರೆ. ಹೀಗಾಗಿ ಮೂರು ತಂಡಗಳಿಗೂ ಮಧ್ಯ ಪ್ರದೇಶ್ ಕ್ರಿಕೆಟ್ ಬೋರ್ಡ್ ಆಯ್ಕೆ ಸಮಿತಿ ಹೊಸ ನಾಯಕನನ್ನು ಸೆಲೆಕ್ಟ್ ಮಾಡಬೇಕಿದೆ. ಇದಕ್ಕೂ ಮುನ್ನ ಮೂರು ಸ್ವರೂಪಗಳಲ್ಲೂ ಮಧ್ಯ ಪ್ರದೇಶ್ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸುತ್ತಿದ್ದರು.

ಅಷ್ಟೇ ಅಲ್ಲದೆ ರಜತ್ ಪಾಟಿದಾರ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಕಣಕ್ಕಿಳಿಯಬೇಕಿದೆ. ಇತ್ತ ನಾಲ್ಕು ತಿಂಗಳುಗಳ ಕಾಲ ಹೊರಗುಳಿದು ಮಾರ್ಚ್ ವೇಳೆ ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ಅವರು ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಲಭ್ಯರಿರಲಿದ್ದಾರೆ. ಇಲ್ಲದಿದ್ದರೆ ಆರ್ಸಿಬಿ ತಂಡ ಕೆಲ ಪಂದ್ಯಗಳಿಂದಲೂ ಹೊರಗುಳಿಯುವ ಸಾಧ್ಯತೆಯಿದೆ.