
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಈವರೆಗೆ 9 ಕ್ಯಾಪ್ಟನ್ಗಳು ಮುನ್ನಡೆಸಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸುವ ಮೂಲಕ ಜಿತೇಶ್ ಆರ್ಸಿಬಿ ತಂಡದ 9ನೇ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ವಿಶೇಷ ದಾಖಲೆಯನ್ನು ಸಹ ಬರೆದಿದ್ದಾರೆ.

ಅಂದರೆ ಆರ್ಸಿಬಿ ತಂಡವನ್ನು ಈವರೆಗೆ ಯಾವುದೇ ವಿಕೆಟ್ ಕೀಪರ್ ಮುನ್ನಡೆಸಿಲ್ಲ. ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾರಥಿಯಾಗಿ ವಿಕೆಟ್ ಕೀಪರ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಆರ್ಸಿಬಿ ತಂಡವನ್ನು ಮುನ್ನಡೆಸಿದ ಮೊದಲ ವಿಕೆಟ್ ಕೀಪರ್ ನಾಯಕ ಎಂಬ ಹೆಗ್ಗಳಿಕೆಯನ್ನು ಜಿತೇಶ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಆರ್ಸಿಬಿ ತಂಡವನ್ನು ಈವರೆಗೆ ಮುನ್ನಡೆಸಿದ ನಾಯಕರುಗಳು ಯಾರೆಲ್ಲಾ ಎಂದು ನೋಡುವುದಾದರೆ...

ರಾಹುಲ್ ದ್ರಾವಿಡ್: ಆರ್ಸಿಬಿ ತಂಡದ ಮೊದಲ ನಾಯಕ ರಾಹುಲ್ ದ್ರಾವಿಡ್. 2008 ರ ಚೊಚ್ಚಲ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು 14 ಪಂದ್ಯಗಳಲ್ಲಿ ದ್ರಾವಿಡ್ ಮುನ್ನಡೆಸಿದ್ದರು. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಕೇವಲ 4 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು.

ಕೆವಿನ್ ಪೀಟರ್ಸನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 2ನೇ ನಾಯಕ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್. 2009 ರಲ್ಲಿ ಪೀಟರ್ಸನ್ ಆರ್ಸಿಬಿ ತಂಡವನ್ನು 6 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಆರ್ಸಿಬಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿತ್ತು.

ಅನಿಲ್ ಕುಂಬ್ಳೆ: 2009 ರಲ್ಲಿ ಕೆವಿನ್ ಪೀಟರ್ಸನ್ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಹೀಗಾಗಿ ಅನಿಲ್ ಕುಂಬ್ಳೆ ಉಳಿದ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ ಅಂತಿಮ ಮ್ಯಾಚ್ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ದ ಸೋತು ಪ್ರಶಸ್ತಿಯನ್ನು ಕೈಚೆಲ್ಲಿಕೊಂಡಿತು. ಇನ್ನು 2010ರಲ್ಲೂ ನಾಯಕರಾಗಿ ಮುಂದುವರೆದ ಕುಂಬ್ಳೆ ಒಟ್ಟು 35 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಕುಂಬ್ಳೆ ನಾಯಕತ್ವದಲ್ಲಿ ಆರ್ಸಿಬಿ 19 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಡೇನಿಯಲ್ ವೆಟ್ಟೋರಿ: ಆರ್ಸಿಬಿ ತಂಡದ ನಾಲ್ಕನೇ ನಾಯಕ ಡೇನಿಯಲ್ ವೆಟ್ಟೋರಿ. 2011 ರಲ್ಲಿ ವೆಟ್ಟೋರಿ ನಾಯಕತ್ವದಲ್ಲಿ ಆರ್ಸಿಬಿ 2ನೇ ಬಾರಿ ಫೈನಲ್ ಪ್ರವೇಶಿಸಿತ್ತು. ಆದರೆ ಸಿಎಸ್ಕೆ ವಿರುದ್ದ ಸೋಲುವ ಮೂಲಕ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಇನ್ನು 2012 ರ ಸೀಸನ್ನಲ್ಲೂ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ವೆಟ್ಟೋರಿ ಒಟ್ಟು 28 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಆರ್ಸಿಬಿ 15 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ.

ವಿರಾಟ್ ಕೊಹ್ಲಿ: ಕಿಂಗ್ ಕೊಹ್ಲಿ 2013 ರಿಂದ 2021 ರವರೆಗೆ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. 2016 ರಲ್ಲಿ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ ಎಸ್ಆರ್ಹೆಚ್ ವಿರುದ್ದ ಸೋಲುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ 143 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಈ ವೇಳೆ 66 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಶೇನ್ ವಾಟ್ಸನ್: 2017 ರ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯ ಅಲಭ್ಯತೆಯ ನಡುವೆ ಶೇನ್ ವಾಟ್ಸನ್ ಮೂರು ಪಂದ್ಯಗಳಲ್ಲಿ ಆರ್ಸಿಬಿ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದೆ.

ಫಾಫ್ ಡುಪ್ಲೆಸಿಸ್: ಆರ್ಸಿಬಿ ತಂಡವನ್ನು ಕಳೆದ ಮೂರು ಸೀಸನ್ಗಳಲ್ಲಿ ಫಾಫ್ ಡುಪ್ಲೆಸಿಸ್ ಮುನ್ನಡೆಸಿದ್ದಾರೆ. ಐಪಿಎಲ್ 2022 ರಲ್ಲಿ ಆರ್ಸಿಬಿಗೆ ಎಂಟ್ರಿ ಕೊಟ್ಟಿದ್ದ ಫಾಫ್ 42 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 21 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ರಜತ್ ಪಾಟಿದಾರ್: ಈ ಬಾರಿಯ ಐಪಿಎಲ್ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ನಾಯಕನಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಅದರಂತೆ ಈವರೆಗೆ 11 ಪಂದ್ಯಗಳಲ್ಲಿ ಮುನ್ನಡೆಸಿರುವ ರಜತ್ 8 ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಜಿತೇಶ್ ಶರ್ಮಾ: ರಜತ್ ಪಾಟಿದಾರ್ ಸಂಪೂರ್ಣ ಫಿಟ್ನೆಸ್ ಹೊಂದಿಲ್ಲದ ಕಾರಣ, ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದರು. ಹೀಗಾಗಿ ಆರ್ಸಿಬಿ ತಂಡವನ್ನು ಜಿತೇಶ್ ಶರ್ಮಾ ಮುನ್ನಡೆಸಿದ್ದಾರೆ. ಇದಾಗ್ಯೂ ಚೊಚ್ಚಲ ಪಂದ್ಯದಲ್ಲೇ ಜಿತೇಶ್ ಸೋಲಿನ ರುಚಿ ನೋಡುವಂತಾಯಿತು.