ಮಾರ್ಚ್ 22 ರಂದು ನಡೆಯಲ್ಲಿರುವ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದ ಆರಂಭದೊಂದಿಗೆ 2025 ರ ಐಪಿಎಲ್ಗೂ ಚಾಲನೆ ಸಿಗಲಿದೆ.
ಈ ಪಂದ್ಯದ ಬಳಿಕ ತನ್ನ ಎರಡನೇ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾರ್ಚ್ 28 ರಂದು ಚೆನ್ನೈನಲ್ಲಿ ಆಡುವ ಆರ್ಸಿಬಿ ತಂಡ ಆ ಬಳಿಕ ತನ್ನ ತವರು ಮೈದಾನದತ್ತ ಪ್ರಯಾಣ ಬೆಳೆಸಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಏಪ್ರಿಲ್ 2 ರಂದು ತನ್ನ ಮೊದಲ ತವರು ಪಂದ್ಯವನ್ನು ಆಡಲಿರುವ ಆರ್ಸಿಬಿಗೆ ಗುಜರಾತ್ ಟೈಟನ್ಸ್ ತಂಡ ಎದುರಾಳಿಯಾಗಿದೆ.
ಆರ್ಸಿಬಿ ಫ್ರಾಂಚೈಸಿ ಈಗಾಗಲೇ ತನ್ನ ತವರು ಪಂದ್ಯಗಳ ಆನ್ಲೈನ್ ಟಿಕೆಟ್ಗಳ ಮಾರಾಟವನ್ನು ಆರಂಭಿಸಿದೆ. ಏಪ್ರಿಲ್ 2 ರಂದು ನಡೆಯಲ್ಲಿರುವ ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಉಳಿದಂತೆ ಈ ಪಂದ್ಯದ ಆಫ್ ಲೈನ್ ಟಿಕೆಟ್ಗಳನ್ನು ಕ್ರೀಡಾಂಗಣದ ಕೌಂಟರ್ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಖರೀದಿಸಬಹುದಾಗಿದೆ.
ಈ ಪಂದ್ಯದ ಬಳಿಕ ಆರ್ಸಿಬಿ ತನ್ನ ಎರಡನೇ ತವರು ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 10 ರಂದು ಆಡಲಿದೆ. ಇದೀಗ ಈ ಪಂದ್ಯದ ಆನ್ಲೈನ್ ಟಿಕೆಟ್ ಮಾರಾಟವನ್ನು ಇಂದು ಆರಂಭಿಸಲಾಗಿದೆ. ಟಿಕೆಟ್ ಕೊಳ್ಳಲು ಆಸಕ್ತರಿರುವವರು ಆರ್ಸಿಬಿಯ https://shop.royalchallengers.com ಅಧಿಕೃತ ವೆಬ್ಸೈಟ್ನಲ್ಲಿ ಹೋಗಿ ಖರೀದಿಸಬಹುದಾಗಿದೆ.
ಇನ್ನು ಟಿಕೆಟ್ಗಳ ಬೆಲೆಯ ವಿಚಾರಕ್ಕೆ ಬರುವುದಾದರರೆ, ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಕ್ಕೆ ನಿಗದಿಪಡಿಸಿದಷ್ಟೇ ಮೊತ್ತವನ್ನು ಡೆಲ್ಲ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ನಿಗದಿಪಡಿಸಲಾಗಿದೆ. ಈ ಪಂದ್ಯದ ಕನಿಷ್ಠ ಟಿಕೆಟ್ ಬೆಲೆ 2300 ರೂಗಳಾಗಿದ್ದರೆ, ಗರಿಷ್ಠ ಟಿಕೆಟ್ ಬೆಲೆ 42000 ರೂ ಆಗಿದೆ. ಈಗಾಗಲೇ ಕೆಲವು ಸ್ಟ್ಯಾಂಡ್ಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಉಳಿದಿರುವ ಸ್ಟ್ಯಾಂಡ್ಗಳ ವಿವರ ಹೀಗಿದೆ.
ಈ ಸುದ್ದಿ ಬರೆಯುವ ಹೊತ್ತಿಗೆ ಕೇವಲ 3 ಸ್ಟ್ಯಾಂಡ್ಗಳ ಟಿಕೆಟ್ಗಳು ಖರೀದಿಗೆ ಲಭ್ಯವಿವೆ. ಅದರಲ್ಲಿ 3 ಸ್ಟ್ಯಾಂಡ್ನ ಟಿಕೆಟ್ ಬೆಲೆ ಕ್ರಮವಾಗಿ 10000, 11000 ಹಾಗೂ 15000 ರೂಗಳಾಗಿದೆ. ಉಳಿದ ಸ್ಟ್ಯಾಂಡ್ಗಳ ಆನ್ಲೈನ್ ಟಿಕೆಟ್ಗಳು ಈಗಾಗಲೇ ಮಾರಾಟವಾಗಿದ್ದು, ಆಫ್ಲೈನ್ ಟಿಕೆಟ್ಗಳನ್ನು ಕ್ರೀಡಾಂಗಣದ ಕೌಂಟರ್ಗಳಲ್ಲಿ ಖರೀದಿಸಬಹುದಾಗಿದೆ.