ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ರಜತ್ ಪಾಟಿದಾರ್ ಮುಂಬರುವ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ್ ತಂಡವನ್ನು ಮುನ್ನಡೆಸಲಿದ್ದಾರೆ. ನವೆಂಬರ್ 23 ರಿಂದ ಶುರುವಾಗಲಿರುವ ಈ ಟೂರ್ನಿಗಾಗಿ 15 ಸದಸ್ಯರ ಮಧ್ಯಪ್ರದೇಶ್ ತಂಡವನ್ನು ಘೋಷಿಸಲಾಗಿದ್ದು, ಈ ತಂಡದ ನಾಯಕರಾಗಿ ಪಾಟಿದಾರ್ ಆಯ್ಕೆಯಾಗಿದ್ದಾರೆ.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಬಾರಿ ರಜತ್ ಪಾಟಿದಾರ್ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ. ಹೀಗಾಗಿಯೇ ಇದೀಗ ಆರ್ಸಿಬಿ ಕೂಡ ರಜತ್ ಅವರಿಗೆ ನಾಯಕತ್ವ ನೀಡುವುದು ಉತ್ತಮ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆರ್ಸಿಬಿ ತಂಡದಿಂದ ನಾಯಕ ಫಾಫ್ ಡುಪ್ಲೆಸಿಸ್ ಹೊರಬಿದ್ದಿದ್ದಾರೆ. ಇದೀಗ ತಂಡದಲ್ಲಿ ವಿರಾಟ್ ಕೊಹ್ಲಿ ಜೊತೆ ರಜತ್ ಪಾಟಿದಾರ್ ಕೂಡ ಇದ್ದಾರೆ. ಪಾಟಿದಾರ್ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರ. ಹೀಗಾಗಿ ಅವರಿಗೆ ನಾಯಕತ್ವ ನೀಡಿ ಪರೀಕ್ಷಿಸುವುದು ಉತ್ತಮ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
ಇದರ ಬೆನ್ನಲ್ಲೇ ಮಧ್ಯಪ್ರದೇಶ್ ತಂಡದ ನಾಯಕರಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಅಲ್ಲದೆ ಮುಂಬರುವ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ್ ತಂಡವು ಫೈನಲ್ಗೆ ತಲುಪಿದರೆ ಆರ್ಸಿಬಿ ತಂಡದ ನಾಯಕತ್ವದ ರೇಸ್ನಲ್ಲಿ ರಜತ್ ಪಾಟಿದಾರ್ ಹೆಸರು ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿಯೇ ಸಿಕ್ಕ ಅವಕಾಶವನ್ನು ಪಾಟಿದಾರ್ ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಮಧ್ಯಪ್ರದೇಶ್ ಟಿ20 ತಂಡ: ರಜತ್ ಪಾಟಿದಾರ್ (ನಾಯಕ), ಅರ್ಪಿತ್ ಗೌಡ್, ಹರ್‌ಪ್ರೀತ್ ಸಿಂಗ್, ಸುಭ್ರಾಂಶು ಸೇನಾಪತಿ, ವೆಂಕಟೇಶ ಅಯ್ಯರ್, ಅವೇಶ್ ಖಾನ್, ಕುಮಾರ್ ಕಾರ್ತಿಕೇಯ, ಕುಲ್ವಂತ್ ಖೆಜ್ರೋಲಿಯಾ, ರಾಹುಲ್ ಬಾಥಮ್, ಅಭಿಷೇಕ್ ಪಾಠಕ್, ಪಂಕಜ್ ಶರ್ಮಾ, ಶಿವಂ ಶುಕ್ಲಾ, ಕಮಲ್ ತ್ರಿಪಾಠಿ, ತ್ರಿಪುರೇಶ್ ಸಿಂಗ್, ವಿಕಾಸ್ ಶರ್ಮಾ.