ಹೊಸ ಇತಿಹಾಸ… RCBಯಂತೆ ಈವರೆಗೆ ಯಾವುದೇ ತಂಡ ಗೆದ್ದಿಲ್ಲ..!
WPL 2026, RCB vs MI: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 154 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತುವ ಮೂಲಕ ಆರ್ಸಿಬಿ ತಂಡವು 20ನೇ ಓವರ್ನ ಕೊನೆಯ ಎಸೆತದಲ್ಲಿ ಜಯ ಸಾಧಿಸಿದೆ.
Updated on: Jan 10, 2026 | 2:17 PM

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟರ್ಗಳಿಂದ. ಅಂದರೆ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಆರ್ಸಿಬಿ ಪಡೆ ಹೊಸ ದಾಖಲೆ ನಿರ್ಮಿಸಿದ್ದಾರೆ.

ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿದ್ದರು.

155 ರನ್ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ 10 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 75 ರನ್ಗಳು ಮಾತ್ರ. ಇನ್ನುಳಿದ 10 ಓವರ್ಗಳಲ್ಲಿ 82 ರನ್ ಗಳಿಸುವ ಮೂಲಕ ಆರ್ಸಿಬಿ ತಂಡವು ರೋಚಕ ಜಯ ಸಾಧಿಸಿದೆ.

ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ 5 ವಿಕೆಟ್ ಕಳೆದುಕೊಂಡ ಬಳಿಕ ಕೊನೆಯ 10 ಓವರ್ಗಳಲ್ಲಿ ಅತ್ಯಧಿಕ ರನ್ ಚೇಸ್ ಮಾಡಿ ಗೆದ್ದ ತಂಡವೆಂಬ ಶ್ರೇಷ್ಠ ದಾಖಲೆಯೊಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನದಾಗಿಸಿಕೊಂಡಿದೆ. ಈ ಮೂಲಕ RCB ತಂಡವು WPL ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗು ಬಡಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ದ್ವಿತೀಯ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಜನವರಿ 12 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
