
RCB ಅಭಿಮಾನಿಗಳ ಕಪ್ ಗೆಲ್ಲುವ ಕನಸು ಕೊನೆಗೂ ಈಡೇರಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ನ (WPL 2024) 2ನೇ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಸುದ್ದಿಯೊಂದಿಗೆ ಆರ್ಸಿಬಿ ಸೋಷಿಯಲ್ ಮೀಡಿಯಾದಲ್ಲೂ ಹೊಸ ಇತಿಹಾಸ ನಿರ್ಮಿಸಿದೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ಇನ್ಸ್ಟಾಗ್ರಾಮ್ನಲ್ಲಿ ಆರ್ಸಿಬಿ ಮಾಡಿದ ಪೋಸ್ಟ್ವೊಂದು ದಾಖಲೆಯ ಲೈಕ್ಸ್ ಪಡೆದುಕೊಂಡಿದೆ. ಅದು ಕೂಡ ಕೇವಲ 9 ನಿಮಿಷಗಳಲ್ಲಿ ಎಂಬುದು ವಿಶೇಷ.

ಅಂದರೆ ಆರ್ಸಿಬಿ ತಂಡವು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಚಾಂಪಿಯನ್ಸ್ ಪೋಸ್ಟ್ ಅತೀ ಕಡಿಮೆ ಅವಧಿಯಲ್ಲಿ 1 ಮಿಲಿಯನ್ (10 ಲಕ್ಷ) ಲೈಕ್ಸ್ ಪಡೆದುಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಅತೀ ಕಡಿಮೆ ಸಮಯದಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡ ಇನ್ಸ್ಟಾಗ್ರಾಮ್ ಪೋಸ್ಟ್ ಎಂಬ ದಾಖಲೆ ಆರ್ಸಿಬಿಯ ಚಾಂಪಿಯನ್ಸ್ ಫೋಟೋ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ ಫೆಬ್ರವರಿ 20 ರಂದು 2ನೇ ಮಗುವಿನ ಆಗಮನದ ಶುಭಸುದ್ದಿಯನ್ನು ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದರು. ಈ ಪೋಸ್ಟ್ ಕೇವಲ 10 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಪಡೆಯುವ ಮೂಲಕ ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ದಾಖಲೆ ಬರೆದಿತ್ತು.

ಇದೀಗ ಆರ್ಸಿಬಿ ತಂಡವು ಚಾಂಪಿಯನ್ ಪಟ್ಟಕ್ಕೇರಿರುವ ಪೋಸ್ಟ್ ಕೇವಲ 9 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಇನ್ಸ್ಟಾಗ್ರಾಮ್ ಲೈಕ್ಸ್ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನದಾಗಿಸಿಕೊಂಡಿರುವುದು ವಿಶೇಷ.