ಇಂಗ್ಲೆಂಡ್ ವಿರುದ್ದದ 3ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದಿದೆ. ಈ ಗೆಲುವಿನ ರೂವಾರಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್. ಏಕೆಂದರೆ ನಿರ್ಣಾಯಕ ಪಂದ್ಯದಲ್ಲಿ ಪಂತ್ 113 ಎಸೆತಗಳಲ್ಲಿ 125 ರನ್ ಬಾರಿಸಿದ್ದರು.ವಿಶೇಷ ಎಂದರೆ ಶತಕದೊಂದಿಗೆ ರಿಷಭ್ ಪಂತ್ ತಮ್ಮ ಹೆಸರಿಗೆ ಹೊಸ ದಾಖಲೆಯನ್ನು ಕೂಡ ಬರೆದರು.
ಹೌದು, ಏಷ್ಯಾದ ಹೊರಗೆ ಏಕದಿನ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಮೂರನೇ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ.ಈ ಸಾಧನೆ ಮೊದಲು ಮಾಡಿದ್ದು ರಾಹುಲ್ ದ್ರಾವಿಡ್.
1999 ರಲ್ಲಿ ಟೀಮ್ ಇಂಡಿಯಾ ಪರ ಕೀಪರ್ ಆಗಿದ್ದ ದ್ರಾವಿಡ್ ಶ್ರೀಲಂಕಾ ವಿರುದ್ದ ಇಂಗ್ಲೆಂಡ್ ನಲ್ಲಿ 145 ರನ್ ಗಳ ಶತಕ ಬಾರಿಸಿದ್ದರು.ಇದಾದ ಬಳಿಕ 2020 ರಲ್ಲಿ ನ್ಯೂಜಿಲೆಂಡ್ ವಿರುದ್ದ ಕೆಎಲ್ ರಾಹುಲ್ (112) ಕೂಡ ಶತಕ ಸಿಡಿಸಿ ಈ ದಾಖಲೆಯನ್ನು ಸರಿಗಟ್ಟಿದ್ದರು.
ಇದೀಗ ಇಂಗ್ಲೆಂಡ್ ವಿರುದ್ದ ಭರ್ಜರಿ ಶತಕ ಸಿಡಿಸುವ ಮೂಲಕ ರಿಷಭ್ ಪಂತ್ ಈ ಸಾಧನೆ ಮಾಡಿದ ಮೂರನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಏಷ್ಯಾದ ಹೊರಗೆ ಏಕದಿನ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ವಿಶೇಷ ಸಾಧಕರ ಪಟ್ಟಿಗೆ ರಿಷಭ್ ಪಂತ್ ಎಂಟ್ರಿ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಒಂದು ಭರ್ಜರಿ ಶತಕದ ಮೂಲಕ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡು ಇಂಗ್ಲೆಂಡ್ ಸರಣಿ ಗೆಲುವನ್ನು ಸ್ಮರಣೀಯವಾಗಿಸಿದ್ದಾರೆ.