ಭಾರತ ಮಹಿಳಾ ಕ್ರಿಕೆಟ್ ತಂಡದ ಧೀಮಂತ ಬ್ಯಾಟರ್ ಸ್ಮೃತಿ ಮಂಧಾನ ಕಡಿಮೆ ಸಮಯದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಈ ಎಡಗೈ ಓಪನರ್ ತಮ್ಮ ಸೊಗಸಾದ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಮಂಧಾನ ಇಂದು ತಮ್ಮ 26ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಮಂಧಾನ 18 ಜುಲೈ 1996 ರಂದು ಮುಂಬೈನಲ್ಲಿ ಜನಿಸಿದರು. 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಮಂಧಾನ ಅಂದಿನಿಂದ ಇಂದಿನವರೆಗೆ ಯಶಸ್ಸಿನ ಉತ್ತುಂಗವನ್ನು ಮುಟ್ಟುತ್ತಿದ್ದಾರೆ. ಮಹಿಳಾ ಕ್ರಿಕೆಟ್ನ ಚೆಂದುಳ್ಳಿ ಚೆಲುವೆ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು ಹೀಗಿವೆ.
ಸ್ಮೃತಿ ಮಂಧಾನ 9 ನೇ ವಯಸ್ಸಿನಲ್ಲಿ ಮಹಾರಾಷ್ಟ್ರ U-15 ತಂಡದಲ್ಲಿ ಮತ್ತು 11 ನೇ ವಯಸ್ಸಿನಲ್ಲಿ U-19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಅವರು ರಾಷ್ಟ್ರೀಯ ತಂಡದ ಸಹ-ನಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೌರವ್ ಗಂಗೂಲಿ ಮತ್ತು ಸ್ಮೃತಿ ಮಂಧಾನ ಅವರ ಆಫ್ ಡ್ರೈವ್ ಅನ್ನು ಮತ್ತೆ ಮತ್ತೆ ನೋಡುವುದೇ ಚಂದ. ಇಬ್ಬರಿಗೂ ಇನ್ನೊಂದು ಸಾಮ್ಯತೆ ಇದೆ. ಸೌರಭ್ ಬಲಗೈ ಬ್ಯಾಟರ್ ಆಗಿದ್ದರೂ ಬಾಲ್ಯದಲ್ಲಿ ತಾತನ ಕ್ರಿಕೆಟ್ ಕಿಟ್ ಬಳಸಿ, ಬಳಸಿ ಎಡಗೈ ಬ್ಯಾಟಿಂಗ್ ಅಭ್ಯಾಸ ಮಾಡಿಕೊಂಡರು. ಅದೇ ರೀತಿ ಸ್ಮೃತಿ ಕೂಡ ದಾದಾ ಕಿಟ್ ಬಳಸಿ ಎಡಗೈ ಬ್ಯಾಟರ್ ಆದರು.
ಸ್ಮೃತಿ ಐಸಿಸಿ ವರ್ಷದ ತಂಡದಲ್ಲಿ ಎಲ್ಲಾ ಮಾದರಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ (ಸೇನಾ ದೇಶ) ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ್ದಾರೆ.
2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆದ ಸ್ಮೃತಿ ಮಂಧಾನ ಅವರಿಗೆ ಆಗ ಕೇವಲ 16 ವರ್ಷ 266 ದಿನಗಳಾಗಿದ್ದವು. ಅವರು ಬಾಂಗ್ಲಾದೇಶ ವಿರುದ್ಧ (ಟಿ20) 36 ಎಸೆತಗಳಲ್ಲಿ 39 ರನ್ ಗಳಿಸಿದರು. ಭಾರತ 10 ರನ್‌ಗಳಿಂದ ಗೆದ್ದಿತು.
ಪುರುಷರ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಮೊದಲ ಪಿಂಕ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ (ಎದುರಾಳಿ ಬಾಂಗ್ಲಾದೇಶ) ಮತ್ತು ಸ್ಮೃತಿ ಮಂಧಾನ (ಎದುರಾಳಿ ಆಸ್ಟ್ರೇಲಿಯಾ) ಇಬ್ಬರೂ ಶತಕ ಬಾರಿಸಿದ್ದಾರೆ. ಕಾಕತಾಳೀಯವೆಂದರೆ ಇಬ್ಬರೂ ಕೂಡ ಒಂದೇ ಸಂಖ್ಯೆಯ (18) ಜೆರ್ಸಿ ತೊಡುತ್ತಾರೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಈ ವಿಶ್ವಾಸಾರ್ಹ ಆರಂಭಿಕ ಆಟಗಾರ್ತಿ 2019 ರಲ್ಲಿ ಅರ್ಜುನ ಪ್ರಶಸ್ತಿಯೂ ಲಭಿಸಿದೆ.
Published On - 2:57 pm, Mon, 18 July 22