
2024-25 ರ ಸೀಸನ್ನ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ಆ ಪ್ರಕಾರ ಬಿಸಿಸಿಐ ಒಪ್ಪಂದದಲ್ಲಿ ಒಟ್ಟು 34 ಆಟಗಾರರು ಸ್ಥಾನ ಪಡೆದಿದ್ದಾರೆ. ಇದರಲ್ಲಿ 9 ಆಟಗಾರರಿಗೆ ಇದೇ ಮೊದಲ ಬಾರಿಗೆ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿ ಸ್ಥಾನ ಸಿಕ್ಕಿದೆ. ಇವರ ಜೊತೆಗೆ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ಗೂ ಬಿಸಿಸಿಐನಿಂದ ಕ್ಷಮಾಧಾನ ಸಿಕ್ಕಿದೆ.

ಆದರೆ, ಈ ಬಾರಿ ಬಿಸಿಸಿಐ ತನ್ನ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಒಬ್ಬ ಆಟಗಾರನಿಗೆ ಮಾತ್ರ ಬಡ್ತಿ ನೀಡಿದೆ. ಕಾರು ಅಪಘಾತದಲ್ಲಿ ಸಾವು ಗೆದ್ದು ಬಂದು ಟೀಂ ಇಂಡಿಯಾದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ಗೆ ಬಿ ಗ್ರೇಡ್‌ನಿಂದ ಎ ಗ್ರೇಡ್‌ಗೆ ಬಡ್ತಿ ನೀಡಲಾಗಿದೆ.

ಕಳೆದ ಕೆಲವು ವರ್ಷಗಳಿಂದ ರಿಷಭ್ ಪಂತ್ ಎಂತಹ ಆಟಗಾರ ಎಂಬುದು ಸಾಬೀತಾಗಿದೆ. 2022 ರಲ್ಲಿ ಸಂಭವಿಸಿದ ಮಾರಕ ಕಾರು ಅಪಘಾತವು ಪಂತ್ ಅವರ ವೃತ್ತಿಜೀವನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು, ಆದರೆ ಅವರು ಅದ್ಭುತ ಪುನರಾಗಮನ ಮಾಡಿ ಅಸಾಧ್ಯವನ್ನು ಸಾಧ್ಯವಾಗಿಸಿದರು. ಅಲ್ಲದೆ ಟೀಂ ಇಂಡಿಯಾ 2024 ರ ಟಿ20 ವಿಶ್ವಕಪ್ ಗೆಲ್ಲುವಲ್ಲು ಪಂತ್ ಪ್ರಮುಖ ಪಾತ್ರವಹಿಸಿದ್ದರು.

ಇದು ಮಾತ್ರವಲ್ಲದೆ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಭಾರತ ತಂಡದ ಭಾಗವೂ ಆಗಿದ್ದರು. ಬಿಸಿಸಿಐನ ಗ್ರೇಡ್ ಎ ಕೇಂದ್ರ ಒಪ್ಪಂದವು ಆಟಗಾರನಿಗೆ ಕೇವಲ ಆರ್ಥಿಕ ಪ್ರತಿಫಲವಲ್ಲ, ಬದಲಿಗೆ ಆಟಗಾರನ ಮೇಲಿನ ಮಂಡಳಿಯ ನಂಬಿಕೆ ಮತ್ತು ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. ಬಿಸಿಸಿಐ ವಾರ್ಷಿಕವಾಗಿ ಬಿ ಗ್ರೇಡ್ ಆಟಗಾರರಿಗೆ 3 ಕೋಟಿ ರೂ. ಮತ್ತು ಎ ಗ್ರೇಡ್ ಆಟಗಾರರಿಗೆ 5 ಕೋಟಿ ರೂ. ನೀಡುತ್ತದೆ. ಇದರರ್ಥ ಈ ಬಾರಿ ಪಂತ್ ಬಿಸಿಸಿಐನಿಂದ 3 ಕೋಟಿ ರೂ.ಗಳ ಬದಲಿಗೆ 5 ಕೋಟಿ ರೂ.ಗಳನ್ನು ಪಡೆಯಲಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯೂ ಬಿಸಿಸಿಐ ಒಟ್ಟು 6 ಆಟಗಾರರನ್ನು ಎ ಗ್ರೇಡ್‌ನಲ್ಲಿ ಸೇರಿಸಿಕೊಂಡಿದೆ. ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಶಮಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರ್ ಅಶ್ವಿನ್ ಈ ಪಟ್ಟಿಯಿಂದ ಹೊರಬಿದ್ದಿದ್ದು, ಅವರ ಸ್ಥಾನದಲ್ಲಿ ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ.