
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 11 ರಿಂದ ಅಂದರೆ ನಾಳೆಯಿಂದ ಪ್ರಾರಂಭವಾಗಲಿದೆ. ಈ ಸರಣಿಗೆ ಸಿದ್ಧತೆಗಳ ನಡುವೆ, ಭಾರತ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೊಂದು ಸಿಕ್ಕಿದೆ. ಮೊದಲ ಪಂದ್ಯಕ್ಕೆ 24 ಗಂಟೆಗಳಿಗೂ ಕಡಿಮೆ ಸಮಯವಿರುವಾಗ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ನೆಟ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ, ಥ್ರೋ-ಡೌನ್ ತಜ್ಞರ ವಿರುದ್ಧ ಬ್ಯಾಟಿಂಗ್ ಮಾಡುವಾಗ ರಿಷಭ್ ಪಂತ್ ಅವರ ಸೊಂಟಕ್ಕೆ ಚೆಂಡು ಬಲವಾಗಿ ಬಡಿದಿದೆ. ಇದರಿಂದ ತೀವ್ರ ನೋವಿನಿಂದ ಬಳಲಿದ ಪಂತ್ಗೆ ಅಭ್ಯಾಸ ಮುಂದುವರೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂತ್ ಅರ್ಧಕ್ಕೆ ಅಭ್ಯಾಸ ನಿಲ್ಲಿಸಿ ಮೈದಾನವನ್ನು ತೊರೆದಿದ್ದಾರೆ.

ಇಂಜುರಿಗೊಳ್ಳುವುದಕ್ಕೂ ಮುನ್ನ ರಿಷಭ್ ಪಂತ್ ಸುಮಾರು 50 ನಿಮಿಷಗಳ ಕಾಲ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದರು. ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಪಂತ್ ಇದೀಗ ಗಾಯಕ್ಕೆ ತುತ್ತಾಗಿದ್ದಾರೆ. ಪಂತ್ ಅವರ ಗಾಯದ ತೀವ್ರತೆಯ ಕುರಿತು ಅಧಿಕೃತ ಹೇಳಿಕೆ ಇನ್ನೂ ಬಿಡುಗಡೆಯಾಗಿಲ್ಲವಾದರೂ, ತಂಡದ ಆಡಳಿತ ಮಂಡಳಿ ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

ರಿಷಭ್ ಪಂತ್ ಭಾರತೀಯ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದು, ಕೆಎಲ್ ರಾಹುಲ್ ನಂತರ ಎರಡನೇ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದಾಗ್ಯೂ, ಅವರ ಇತ್ತೀಚಿನ ಏಕದಿನ ಫಾರ್ಮ್ ಮತ್ತು ಆಯ್ಕೆ ಚರ್ಚೆಗಳನ್ನು ನೋಡಿದರೆ, ಈ ಗಾಯವು ತಂಡಕ್ಕೆ ದೊಡ್ಡ ತಲೆನೋವನ್ನುಂಟುಮಾಡಬಹುದು.

ಟೀಂ ಇಂಡಿಯಾ ಈಗ ಪಂತ್ ಅವರ ಚೇತರಿಕೆಯತ್ತ ಗಮನ ಹರಿಸಿದ್ದು, ಗಾಯವು ಗಂಭೀರವಾಗಿಲ್ಲದಿದ್ದರೆ ಪಂತ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರಿಗೆ ವಿಶ್ರಾಂತಿ ಅಗತ್ಯವಿದ್ದರೆ, ಅವರು ಸರಣಿಯ ಆರಂಭಿಕ ಪಂದ್ಯವನ್ನು ತಪ್ಪಿಸಿಕೊಳ್ಳಬಹುದು. ಸರಣಿಯ ಮೊದಲ ಪಂದ್ಯ ವಡೋದರಾದಲ್ಲಿ ನಡೆಯುತ್ತಿದ್ದು, ತಂಡದ ಆಡಳಿತ ಮಂಡಳಿ ಶೀಘ್ರದಲ್ಲೇ ಪಂತ್ ಗಾಯದ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಪಂತ್ ಈ ಹಿಂದೆ 2025 ರ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಗಾಯಗೊಂಡಿದ್ದರು. ಲಾರ್ಡ್ಸ್ ಟೆಸ್ಟ್ ಸಮಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡದ್ದ ಪಂತ್, ಆ ನಂತರ ಮ್ಯಾಂಚೆಸ್ಟರ್ ಟೆಸ್ಟ್‌ನ ಮೊದಲ ದಿನದಂದು ತಮ್ಮ ಬಲಗಾಲಿಗೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದರು. ಇದರಿಂದ ಪಂತ್ ಸ್ವಲ್ಪ ದಿನಗಳವರೆಗೆ ಕ್ರಿಕೆಟ್ ಮೈದಾನದಿಂದ ದೂರವಿದ್ದರು. ಇದೀಗ ಪಂತ್ ಮತ್ತೆ ಗಾಯಗೊಂಡಿರುವುದು ಟೀಂ ಇಂಡಿಯಾಕ್ಕೆ ಗಮನಾರ್ಹ ಹಿನ್ನಡೆಯಾಗಿದೆ.