
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳು ಮುಗಿದಿದ್ದು, ಇಂಗ್ಲೆಂಡ್ 2-1 ಮುನ್ನಡೆಯಲ್ಲಿದೆ. ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ 22 ರನ್‌ಗಳಿಂದ ಸೋತಿರುವುದರಿಂದ ನಾಲ್ಕನೇ ಪಂದ್ಯವು ಗಿಲ್ ಪಡೆಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿದೆ.

ಆದಾಗ್ಯೂ ಈ ಸರಣಿಯಲ್ಲಿ ತಂಡದ ಬ್ಯಾಟಿಂಗ್ ವಿಭಾಗ ಗಮನಾರ್ಹ ಪ್ರದರ್ಶನ ನೀಡಿದೆ. ಅದರಲ್ಲೂ ರಿಷಭ್ ಪಂತ್ ಇಲ್ಲಿಯವರೆಗೆ ನಡೆದ ಮೂರು ಪಂದ್ಯಗಳಲ್ಲಿ ರನ್ಗಳ ಮಳೆ ಹರಿಸಿದ್ದು, ಇಲ್ಲಿಯವರೆಗೆ ಆಡಿದ ಮೂರು ಪಂದ್ಯಗಳಲ್ಲಿ 2 ಶತಕ ಮತ್ತು 2 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ, ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದೊಡ್ಡ ದಾಖಲೆಯನ್ನು ಸಹ ಸೃಷ್ಟಿಸಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಇದುವರೆಗೆ ಮೂರು ಆವೃತ್ತಿಗಳು ಮುಗಿದಿದ್ದು, ನಾಲ್ಕನೇ ಆವೃತ್ತಿ ಶುರುವಾಗಿದೆ. ಇದರಲ್ಲಿ ರಿಷಭ್ ಪಂತ್ ಪ್ರತಿಯೊಂದು ಆವೃತ್ತಿಯಲ್ಲೂ 15 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪ್ರತಿ ಆವೃತ್ತಿಯಲ್ಲಿ 15ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಮೊದಲ ಸೀಸನ್‌ನಲ್ಲಿ 22 ಸಿಕ್ಸರ್‌ಗಳನ್ನು ಹೊಡಿದಿದ್ದ ರಿಷಭ್ ಪಂತ್, ಎರಡನೇ ಸೀಸನ್‌ನಲ್ಲಿ 16 ಸಿಕ್ಸರ್‌ಗಳು ಮತ್ತು ಮೂರನೇ ಸೀಸನ್‌ನಲ್ಲಿ 16 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈಗ ನಾಲ್ಕನೇ ಸೀಸನ್ ಆರಂಭವಾಗಿದ್ದು, ಈ ಸೀಸನ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಅವರು ಈಗಾಗಲೇ 15 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ದೊಡ್ಡ ದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ. ಆದರೆ ಬೆರಳಿನ ಗಾಯದಿಂದಾಗಿ ರಿಷಭ್ ಪಂತ್ ಆಡುವುದು ಅನುಮಾನವಾಗಿದೆ. ಈ ಪಂದ್ಯದಲ್ಲಿ ಅವರು ಆಡಿದರೆ, ಭಾರತ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವೀರೇಂದ್ರ ಸೆಹ್ವಾಗ್ 90 ಸಿಕ್ಸರ್ ಬಾರಿಸಿದ್ದರೆ, ಪಂತ್ ಅವರ ಹೆಸರಿನಲ್ಲಿ 88 ಸಿಕ್ಸರ್‌ಗಳಿವೆ.