
ರಾಂಚಿಯಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆರಂಭಿಕನಾಗಿ ಕಣಕ್ಕಿಳಿದಿದ್ದ ರೋಹಿತ್ 51 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 57 ರನ್ ಬಾರಿಸಿದರು. ಈ ಮೂಲಕ ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನದಲ್ಲಿ ವಿಶೇಷ ಮೈಲಿಗಲ್ಲು ದಾಟಿದರು.

ಈ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ರೋಹಿತ್ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 2,000 ರನ್‌ಗಳನ್ನು ಪೂರ್ಣಗೊಳಿಸಿದರು. ಇದರ ಜೊತೆಗೆ ರೋಹಿತ್ ಶರ್ಮಾ ಆರು ವಿಭಿನ್ನ ತಂಡಗಳ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2,000 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಎಂಟು ತಂಡಗಳ ವಿರುದ್ಧ ಈ ಸಾಧನೆ ಮಾಡಿದ ಸಚಿನ್ ತೆಂಡೂಲ್ಕರ್ ಭಾರತೀಯ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಏಳು ತಂಡಗಳ ವಿರುದ್ಧ ಈ ಸಾಧನೆ ಮಾಡಿದ್ದರೆ, ವಿರಾಟ್ ಕೊಹ್ಲಿ ಆರು ತಂಡಗಳ ವಿರುದ್ಧ ಈ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 43 ಎಸೆತಗಳಲ್ಲಿ 50 ರನ್ ಗಳಿಸಿದರು. ಇದು ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ 60 ನೇ ಅರ್ಧಶತಕವಾಗಿದೆ. ಏಕದಿನ ಪಂದ್ಯದಲ್ಲಿ ಸತತ ಮೂರನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಅರ್ಧಶತಕ ಗಳಿಸಿದ್ದಾರೆ. ಇದಕ್ಕೂ ಮೊದಲು, ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಅರ್ಧಶತಕ ಬಾರಿಸಿದ್ದರು.

ಈ ದಾಖಲೆಯ ಹೊರತಾಗಿ, ರೋಹಿತ್ ಶರ್ಮಾ ಪ್ರಸ್ತುತ 20,000 ಅಂತರರಾಷ್ಟ್ರೀಯ ರನ್‌ಗಳು ಸೇರಿದಂತೆ ಇನ್ನೂ ಅನೇಕ ಅಂತರರಾಷ್ಟ್ರೀಯ ದಾಖಲೆಗಳನ್ನು ಮುರಿಯುವ ಸನಿಹದಲ್ಲಿದ್ದಾರೆ. ಉಳಿದ 2 ಪಂದ್ಯಗಳಲ್ಲಿ ರೋಹಿತ್ ಇನ್ನು ಹಲವು ದಾಖಲೆಗಳನ್ನು ನಿರ್ಮಿಸಲಿದ್ದಾರೆ. ಇನ್ನು ಈ ಪಂದ್ಯದಲ್ಲಿ ರೋಹಿತ್ ಏಕದಿನದಲ್ಲಿ ಅತ್ಯಧಿಕ ಸಿಕ್ಸರ್‌ಗಳನ್ನು ಬಾರಿಸಿರುವ ಬ್ಯಾಟರ್ಗಳ ಪಟ್ಟಿಯಲ್ಲಿ ಅಫ್ರಿದಿ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ್ದಾರೆ.