ಭಾರತ ತಂಡವು ಶ್ರೀಲಂಕಾ ವಿರುದ್ಧದ ಸರಣಿಯ ಮುಕ್ತಾಯದ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧ ಸರಣಿ ಆಡಲಿದೆ. ಜನವರಿ 18 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ. ಆದರೆ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಳ್ಳುವುದು ಅನುಮಾನ.
ಈಗಾಗಲೇ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ವೇಳೆ ಕೊಹ್ಲಿ ಹಾಗೂ ಹಿಟ್ಮ್ಯಾನ್ಗೆ ವಿಶ್ರಾಂತಿ ನೀಡಲಾಗಿದೆ. ಇದಾಗ್ಯೂ ಈ ಇಬ್ಬರು ಆಟಗಾರರು ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಮುಂಬರುವ ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಗೂ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಆಯ್ಕೆಗೆ ಪರಿಗಣಿಸಲಾಗುತ್ತಿಲ್ಲ ಎಂಬ ಮಾಹಿತಿಯೊಂದು ಹೊರಬಿದ್ದಿದೆ.
ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, ಹಿರಿಯ ಆಟಗಾರರನ್ನು ಏಕದಿನ ಹಾಗೂ ಟೆಸ್ಟ್ ಸರಣಿಗಳಿಗೆ ಮಾತ್ರ ಆಯ್ಕೆ ಮಾಡಲಿದ್ದಾರೆ. ಅದರಲ್ಲೂ ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಟಿ20 ಸರಣಿಗಳಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲು ಬಿಸಿಸಿಐ ಬಯಸಿದೆ.
ಇತ್ತ ಶ್ರೀಲಂಕಾ ವಿರುದ್ಧ ಯುವ ಪಡೆಯನ್ನು ಕಣಕ್ಕಿಳಿಸಿರುವ ಬಿಸಿಸಿಐ ಮುಂಬರುವ ಸರಣಿಯ ಮೂಲಕ ಪ್ರಯೋಗ ಮುಂದುವರೆಸಲು ಬಯಸಿದೆ. ಏಕೆಂದರೆ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಈಗಲೇ ತಂಡವನ್ನು ಕಟ್ಟುವ ಇರಾದೆಯಲ್ಲಿದೆ ಬಿಸಿಸಿಐ.
ಹೀಗಾಗಿ 35 ವರ್ಷದ ರೋಹಿತ್ ಶರ್ಮಾ ಅವರನ್ನು ಇನ್ಮುಂದೆ ಟಿ20 ತಂಡದ ಆಯ್ಕೆಗೆ ಪರಿಗಣಿಸುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಕೊಹ್ಲಿಯ ಫಾರ್ಮ್ ಹೇಗಿರಲಿದೆ ಎಂಬುದರ ಮೇಲೆ ಅವರ ಟಿ20 ಭವಿಷ್ಯ ನೆಲೆ ನಿಂತಿದೆ.
ಒಟ್ಟಿನಲ್ಲಿ 2024 ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಬಿಸಿಸಿಐ ಯುವ ಪಡೆಯನ್ನು ಸಜ್ಜುಗೊಳಿಸುವ ಇರಾದೆಯಲ್ಲಿದೆ. ಹೀಗಾಗಿ ಹಿರಿಯ ಆಟಗಾರರಿಗೆ ಇನ್ಮುಂದೆ ಟಿ20 ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಶ್ರೀಲಂಕಾ ವಿರುದ್ಧ ತರುಣರ ಬಳಗವನ್ನು ಕಣಕ್ಕಿಳಿಸಲಾಗಿದೆ.