ದಕ್ಷಿಣ ಆಫ್ರಿಕಾದಲ್ಲಿ ಸಾಗುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ವನಿತೆಯರು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಹಾಗೂ ಒಂದು ಪಂದ್ಯದಲ್ಲಿ ಸೋಲು ಕಂಡಿರುವ ಹರ್ಮನ್ ಪಡೆ ಸೆಮಿ ಫೈನಲ್ಗೂ ಪ್ರವೇಶ ಪಡೆದಿದೆ. ಸೋಮವಾರ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 5 ರನ್ಗಳ ರೋಚಕ ಜಯ ಸಾಧಿಸಿತು.
ಭಾರತ ಗೆಲುವಿನಲ್ಲಿ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಕೊಡುಗೆ ಅಪಾರವಾಗಿತ್ತು. ಈ ಪಂದ್ಯದ ಮೊದಲ ಓವರ್ನಿಂದ 19ನೇ ಓವರ್ ವರೆಗೆ ಕ್ರೀಸ್ನಲ್ಲಿದ್ದ ಮಂಧಾನ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 56 ಎಸೆತಗಳಲ್ಲಿ 87 ರನ್ಗಳನ್ನು ಚಚ್ಚಿದರು. ಇದು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇವರ ಗರಿಷ್ಠ ಸ್ಕೋರ್ ಆಗಿದೆ.
ಮಂಧಾನ ಅವರ ಈ ಮನಮೋಹಕ ಆಟಕ್ಕೆ ಫಿದಾ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಶೇಷವಾಗಿ ಬರೆದುಕೊಂಡಿದೆ. ''ನಮ್ಮ ನಂಂಬರ್ 18 ನಿಂದ ಮತ್ತೊಂದು ದಿನ, ಮತ್ತೊಂದು ಅರ್ಧಶತಕ, ಇದೇ ಲಯದಲ್ಲಿ ಮುಂದುವರೆಯಿರಿ ಸ್ಮೃತಿ,'' ಎಂದು ಬರೆದು ಫೊಟೋ ಹಂಚಿಕೊಂಡಿದೆ.
ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಸ್ಮೃತಿ 41 ಎಸೆತಗಳಲ್ಲಿ 52 ರನ್ ಗಳಿಸಿ ತಂಡಕ್ಕೆ ಕೊಡುಗೆ ನೀಡಿದ್ದರು. ಇದನ್ನು ನೆನಪಿಸಿಕೊಂಡು ಆರ್ಸಿಬಿ ಟ್ವೀಟ್ ಮಾಡಿದೆ. ಇಲ್ಲಿ ನಂಬರ್ 18 ಎಂಬುದು ಸ್ಮೃತಿ ಅವರ ಜೆರ್ಸಿ ಸಂಖ್ಯೆ ಆಗಿದೆ.
ಇತ್ತೀಚೆಗಷ್ಟೆ ಮಂಧಾನ ಅವರನ್ನು ಆರ್ಸಿಬಿ ಫ್ರಾಂಚೈಸಿ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಬರೋಬ್ಬರಿ 3.4 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಈ ಮೂಲಕ ಡಬ್ಲ್ಯೂಪಿಎಲ್ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರ್ತಿ ಆದರು. ಅಲ್ಲದೆ ಆರ್ಸಿಬಿ ಮಂಧಾನ ಅವರಿಗೆ ಕ್ಯಾಪ್ಟನ್ ಪಟ್ಟ ಕೂಡ ನೀಡಿದೆ. (ಫೋಟೋ ಕೃಪೆ: ಆರ್ಸಿಬಿ ಟ್ವಿಟ್ಟರ್ ಖಾತೆ)
ಸದ್ಯ ಮಹಿಳಾ ಟಿ20 ವಿಶ್ವಕಪ್ನಲ್ಲಿ ಸೆಮೀಸ್ಗೆ ತಲುಪಿರುವ ಭಾರತ ತಂಡ ಫೆಬ್ರವರಿ 23 ಗುರುವಾರದಂದು ಕೇಪ್ಟೌನ್ನ ನ್ಯೂಲೆಂಡ್ಸ್ನಲ್ಲಿ ಆಸ್ಟ್ರೇಲಿಯಾ ವಿರುದ್ದ ಸೆಣೆಸಾಟ ನಡೆಸಲಿದೆ. ಆಸೀಸ್ ವಿರುದ್ಧ ಕೆಟ್ಟ ದಾಖಲೆ ಹೊಂದಿರುವ ಹರ್ಮನ್ ಪಡೆ ಯಾವರೀತಿ ಪ್ರದರ್ಶನ ನೀಡುತ್ತಾರೆ ನೋಡಬೇಕಿದೆ.
ಭಾರತದ ಬ್ಯಾಟಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿರುವ ಸ್ಮೃತಿ ಮಂಧಾನ ಭರ್ಜರಿ ಫಾರ್ಮ್ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಆದರೆ, ಟೂರ್ನಿಯಲ್ಲಿ ಇವರಿಗೆ ಬೇರೆ ಬ್ಯಾಟರ್ಗಳು ಸರಿಯಾದ ಸಾಥ್ ನೀಡುತ್ತಿಲ್ಲ. ಸೆಮೀಸ್ನಲ್ಲಾದರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ಬರುವ ನಿರೀಕ್ಷಿಯಿದೆ.
ಭಾರತ- ಆಸ್ಟ್ರೇಲಿಯಾ ಸೆಮಿ ಫೈನಲ್ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 6:30ಕ್ಕೆ ಶುರುವಾಗಲಿದೆ. 6 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ಇರಲಿದೆ.
Published On - 8:36 am, Tue, 21 February 23