ಸ್ಪೋಟಕ ತ್ರಿಶತಕ ಸಿಡಿಸಿ ಅಬ್ಬರಿಸಿದ CSK ತಂಡದ ಯುವ ದಾಂಡಿಗ
Sameer Rizvi: ಉತ್ತರ ಪ್ರದೇಶ ಮೂಲದ ಸಮೀರ್ ರಿಝ್ವಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಯುವ ಆಟಗಾರನ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಆಸಕ್ತಿ ತೋರಿಸಿದ್ದವು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 8.40 ಕೋಟಿ ರೂ.ಗೆ ನೀಡಿ ಯುವ ಬ್ಯಾಟರ್ನನ್ನು ತನ್ನದಾಗಿಸಿಕೊಂಡಿದೆ.
Updated on:Feb 26, 2024 | 1:33 PM

ದೇಶೀಯ ಅಂಗಳದಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಸಿಕೆ ನಾಯ್ದು ಟ್ರೋಫಿ ಪಂದ್ಯಾವಳಿಯಲ್ಲಿ ಯುವ ಬ್ಯಾಟರ್ ಸಮೀರ್ ರಿಝ್ವಿ ಸ್ಪೋಟಕ ದ್ವಿಶತಕ ಬಾರಿಸಿ ಅಬ್ಬರಿಸಿದ್ದಾರೆ. ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ಮತ್ತು ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಉತ್ತರ ಪ್ರದೇಶ ತಂಡದ ಪರ ನಾಯಕ ಸಮೀರ್ ರಿಝ್ವಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ರಿಝ್ವಿ ಸೌರಾಷ್ಟ ಬೌಲರ್ಗಳನ್ನು ಮನಸೊ ಇಚ್ಛೆ ದಂಡಿಸಿದರು. ಪರಿಣಾಮ ಮೊದಲ ದಿನದಾಟದಲ್ಲೇ ರಿಝ್ವಿ ಬ್ಯಾಟ್ನಿಂದ 134 ರನ್ ಮೂಡಿಬಂತು.

ಇನ್ನು 2ನೇ ಸಮೀರ್ ರಿಝ್ವಿ ತಮ್ಮ ಸಿಡಿಲಬ್ಬರವನ್ನು ಮುಂದುವರೆಸಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈಯುವ ಮೂಲಕ ಕೇವಲ 165 ಎಸೆತಗಳಲ್ಲಿ ಭರ್ಜರಿ ದ್ವಿಶತಕ ಪೂರೈಸಿದರು. ಇನ್ನು ದ್ವಿಶತಕ ನಂತರದ ತುಸು ಹೊತ್ತು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ರಿಝ್ವಿ ಮತ್ತೆ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದರು.

ಅತ್ತ ಡಬಲ್ ಸೆಂಚುರಿ ಬಳಿಕ ಕೂಡ ರಿಝ್ವಿಯ ಅಬ್ಬರನ್ನು ತಡೆಯಲು ಸೌರಾಷ್ಟ್ರ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. ಪರಿಣಾಮ ಕೇವಲ 260 ಎಸೆತಗಳಲ್ಲಿ 12 ಭರ್ಜರಿ ಸಿಕ್ಸ್ ಹಾಗೂ 33 ಫೋರ್ಗಳೊಂದಿಗೆ ತ್ರಿಶತಕ ಸಿಡಿಸಿದರು. ಸಮೀರ್ ರಿಝ್ವಿಯ (312) ಈ ಸ್ಪೋಟಕ ತ್ರಿಶತಕದ ನೆರವಿನಿಂದ ಉತ್ತರ ಪ್ರದೇಶ ತಂಡ 6 ವಿಕೆಟ್ ನಷ್ಟಕ್ಕೆ 680* ರನ್ಗಳಿಸಿ ಬ್ಯಾಟಿಂಗ್ ಮುಂದುವರೆಸಿದೆ.

ಐಪಿಎಲ್ 2024 ರ ಮಿನಿ ಹರಾಜಿನಲ್ಲಿ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸಮೀರ್ ರಿಝ್ವಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬರೋಬ್ಬರಿ 8.40 ಕೋಟಿ ರೂ. ನೀಡಿ ಖರೀದಿಸಿದೆ. ಸ್ಪೋಟಕ ಇನಿಂಗ್ಸ್ ಮೂಲಕ ಈಗಾಗಲೇ ಸಂಚಲನ ಸೃಷ್ಟಿಸಿರುವ ರಿಝ್ವಿ ಈ ಬಾರಿಯ ಐಪಿಎಲ್ ಮೂಲಕ ಸಿಎಸ್ಕೆ ಪರ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
Published On - 1:30 pm, Mon, 26 February 24



















