
ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ನಲ್ಲಿ 35 ರನ್ ಬಾರಿಸುವ ಮೂಲಕ ದಾಖಲೆ ಬರೆದಿದ್ದರು. ಈ ಭರ್ಜರಿ ಬ್ಯಾಟಿಂಗ್ಗೆ ನಾನೇ ಕಾರಣ ಎಂದು ಪತ್ನಿ ಸಂಜನಾ ಗಣೇಶನ್ ತಮಾಷೆ ಮಾಡಿದ್ದಾರೆ. ವಿಶೇಷ ಎಂದರೆ ಸಂಜನಾ ಗಣೇಶನ್ ಕೂಡ ಸದ್ಯ ಟೀಮ್ ಇಂಡಿಯಾ ಜೊತೆ ಇಂಗ್ಲೆಂಡ್ನಲ್ಲಿದ್ದಾರೆ.

ಕ್ರೀಡಾ ನಿರೂಪಕಿಯಾಗಿರುವ ಸಂಜನಾ ಗಣೇಶನ್ ಅವರನ್ನು 2021 ರಲ್ಲಿ ಗೋವಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಜಸ್ಪ್ರೀತ್ ಬುಮ್ರಾ ವಿವಾಹವಾಗಿದ್ದರು. ವಿವಾಹಕ್ಕೂ ಮುನ್ನ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ ತಮ್ಮ ವೈಯುಕ್ತಿಕ ಜೀವನನ್ನು ಗೌಪ್ಯವಾಗಿಟ್ಟುಕೊಂಡಿದ್ದ ಬುಮ್ರಾ ವಿವಾಹದ ಸುದ್ದಿಯೊಂದಿಗೆ ತನ್ನ ಗರ್ಲ್ಫ್ರೆಂಡ್ ಯಾರೆಂಬುದನ್ನು ಬಹಿರಂಗಪಡಿಸಿದ್ದರು.

2019ರ ವಿಶ್ವಕಪ್‌ನಲ್ಲಿ ಹೋಸ್ಟ್ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್‌ನ ನಿರೂಪಕಿಯರಲ್ಲಿ ಒಬ್ಬರಾಗಿದ್ದಾಗ ಸಂಜನಾ ಗಣೇಶನ್ ಭಾರೀ ಜನಮನ್ನಣೆ ಪಡೆದಿದ್ದರು. ಅಲ್ಲದೆ ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ನಿರೂಪಿಸುವ ಮೂಲಕ ಕ್ರಿಕೆಟ್ ಅಂಗಳದ ಸೆನ್ಸೇಷನ್ ಆ್ಯಂಕರ್ ಎನಿಸಿಕೊಂಡಿದ್ದರು.

ಅಂದಹಾಗೆ ಸಂಜನಾ ಗಣೇಶನ್ ಪುಣೆ ವಿಶ್ವವಿದ್ಯಾನಿಲಯದಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಆದರೆ ಈಗ ಕ್ರೀಡಾ ನಿರೂಪಕಿಯಾಗಿ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ.

ಸಂಜನಾ ಗಣೇಶನ್ 2014 ರಲ್ಲಿ ರಿಯಾಲಿಟಿ ಶೋ 'ಎಂಟಿವಿ ಸ್ಪ್ಲಿಟ್ಸ್ವಿಲ್ಲಾ'ದ ಭಾಗವಾಗಿದ್ದರು. ಆದರೆ ಗಾಯಗೊಂಡ ನಂತರ ಕಾರ್ಯಕ್ರಮವನ್ನು ಅರ್ಧದಲ್ಲೇ ತೊರೆದಿದ್ದರು. ಇದಾದ ಬಳಿಕ ಕ್ರೀಡಾ ನಿರೂಪಕಿಯಾಗಿ ಸಂಜನಾ ಹೊಸ ಇನಿಂಗ್ಸ್ ಆರಂಭಿಸಿದ್ದರು.

ಇದೀಗ ಕ್ರೀಡಾ ನಿರೂಪಕಿಯಾಗಿ, ಜೊತೆಗೆ ಟೀಮ್ ಇಂಡಿಯಾದ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಅವರ ಪತ್ನಿಯಾಗಿ ಸಂಜನಾ ಗಣೇಶನ್ ಗುರುತಿಸಿಕೊಳ್ಳುತ್ತಿದ್ದಾರೆ.