- Kannada News Photo gallery Cricket photos Why Did Sanju Samson Leave Rajasthan Royals? Buttler's Release Explained
Sanju Samson: ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತೊರೆಯಲು ಕಾರಣ ಬಹಿರಂಗ
Sanju Samson: ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೋಸ್ ಬಟ್ಲರ್ ಅವರ ಬಿಡುಗಡೆ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ. ಸಂಜು ಬಟ್ಲರ್ ಅವರನ್ನು ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದರು ಆದರೆ ರಾಯಲ್ಸ್ ಬಟ್ಲರ್ ಅವರನ್ನು ಬಿಟ್ಟು ಹೆಟ್ಮೈರ್ ಅವರನ್ನು ಉಳಿಸಿಕೊಂಡಿತು. ಇದರಿಂದ ಅಸಮಾಧಾನಗೊಂಡ ಸಂಜು ತಂಡ ತೊರೆದಿರಬಹುದು ಎಂದು ವರದಿಯಾಗಿದೆ.
Updated on: Aug 14, 2025 | 7:33 PM

ರಾಜಸ್ಥಾನ್ ರಾಯಲ್ಸ್ ತಂಡದ ಹಾಲಿ ನಾಯಕ ಸಂಜು ಸ್ಯಾಮ್ಸನ್ ಮುಂದಿನ ಆವೃತ್ತಿಗೂ ಮುನ್ನವೇ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಸ್ವತಃ ಸಂಜು ಅವರೇ ತನ್ನನ್ನು ತಂಡದಿಂದ ಕೈಬಿಡುವಂತೆ ಅಥವಾ ಟ್ರೇಡ್ ಮಾಡುವಂತೆ ಫ್ರಾಂಚೈಸಿ ಬಳಿ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ ತಂಡದ ನಾಯಕನಾಗಿರುವ ಸಂಜು ಫ್ರಾಂಚೈಸಿ ತೊರೆಯಲು ಕಾರಣವೇನು ಎಂಬುದು ಇದುವರೆಗೆ ಬಹಿರಂಗವಾಗಿಲ್ಲ.

ವಾಸ್ತವವಾಗಿ ಕಳೆದ 8 ಆವೃತ್ತಿಗಳಲ್ಲಿ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದಾರೆ. 2013 ರಲ್ಲಿ ಈ ತಂಡದ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸಂಜು ಸತತ 3 ಆವೃತ್ತಿಗಳಲ್ಲಿ ತಂಡದ ಪರ ಆಡಿದ್ದರು. ಆ ನಂತರ ಫ್ರಾಂಚೈಸಿಯನ್ನು 2 ವರ್ಷಗಳ ಕಾಲ ನಿಷೇಧಿಸಿದಾಗ, ಸಂಜು 2016 ಮತ್ತು 2017 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಆಡಿದ್ದರು.

ಆ ನಂತರ ರಾಜಸ್ಥಾನ ರಾಯಲ್ಸ್ ತಂಡಕ್ಕೆ ವಿಧಿಸಲಾಗಿದ್ದ ನಿಷೇಧ ತೆರವಾದ ಬಳಿಕ 2018 ರಲ್ಲಿ ಮತ್ತೆ ಸಂಜು ಈ ತಂಡವನ್ನು ಸೇರಿಕೊಂಡರು. ಅಂದಿನಿಂದ ಈ ತಂಡದ ಭಾಗವಾಗಿರುವ ಸಂಜು. 2021 ರಲ್ಲಿ ತಂಡದ ನಾಯಕತ್ವವಹಿಸಿಕೊಂಡರು. ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ 14 ವರ್ಷಗಳ ನಂತರ ಐಪಿಎಲ್ ಫೈನಲ್‌ಗೆ ತಲುಪಿತ್ತು.

ಆದಾಗ್ಯೂ 2024 ರ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ತಂಡದ ಪರ ಹೆಚ್ಚು ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಇಂಜುರಿ ಸಮಸ್ಯೆ. ಇದರ ಜೊತೆಗೆ ತಂಡದ ಪ್ರದರ್ಶನ ಕೂಡ ತೀರ ಕಳಪೆಯಾಗಿತ್ತು. ಅಲ್ಲದೆ ತಂಡದಲ್ಲಿ ಸಂಜುಗೆ ಯಾವುದೇ ಬೆಲೆ ಇಲ್ಲ ಎಂಬುದು ಪಂದ್ಯಾವಳಿಯ ನಡುವೆ ಜಗಜ್ಜಾಹೀರಾಗಿತ್ತು.

ಈ ನಡುವೆ ಸಂಜು ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯಲು ಇದೇ ಕಾರಣವಾಗಿರಬಹುದು ಎಂಬ ಸುದ್ದಿಯೊಂದು ಹೊರಬಿದ್ದಿದೆ. ಕ್ರಿಕ್‌ಬಜ್ ಸುದ್ದಿಯ ಪ್ರಕಾರ, ಕಳೆದ ವರ್ಷ ನಡೆದ ಮೆಗಾ ಹರಾಜಿಗೆ ಮುನ್ನ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ತಂಡದ ಈ ನಿರ್ಧಾರ ನಾಯಕ ಸಂಜು ಸ್ಯಾಮ್ಸನ್ರನ್ನು ಅಸಮಾಧಾನಗೊಳ್ಳುವಂತೆ ಮಾಡಿತ್ತು.

ಬಟ್ಲರ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೆಂಬ ಬೇಡಿಕೆಯನ್ನು ಸ್ಯಾಮ್ಸನ್ ಮುಂದಿಟ್ಟಿದ್ದರು. ಆದಾಗ್ಯೂ, ಸಂಜು ಅವರ ಮಾತನ್ನು ಕೇಳದ ಫ್ರಾಂಚೈಸಿ, ಬಟ್ಲರ್ ಅವರನ್ನು ಕೈಬಿಟ್ಟು ಶಿಮ್ರಾನ್ ಹೆಟ್ಮೈರ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿತು. ಫ್ರಾಂಚೈಸಿಯ ಈ ನಡೆ ಸಂಜು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿಯೇ ಸಂಜು ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಅಲ್ಲದೆ ಐಪಿಎಲ್ ಆರಂಭಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ಯಾಮ್ಸನ್, ‘ಬಟ್ಲರ್ ನಿರ್ಗಮನ ನನಗೆ ಅತ್ಯಂತ ಕಷ್ಟಕರವಾದ ನಿರ್ಧಾರಗಳಲ್ಲಿ ಒಂದಾಗಿತ್ತು. ಇದನ್ನು ನಾನು ಬಟ್ಲರ್ ಅವರ ಬಳಿಯೂ ಚರ್ಚಿಸಿದ್ದೆ. ಹೀಗಾಗಿ ಐಪಿಎಲ್‌ನಲ್ಲಿ ನಾನು ಒಂದು ವಿಷಯವನ್ನು ಬದಲಾಯಿಸಲು ಸಾಧ್ಯವಾದರೆ, ಪ್ರತಿ ಮೂರು ವರ್ಷಗಳಿಗೊಮ್ಮೆ ಆಟಗಾರರನ್ನು ಬಿಡುಗಡೆ ಮಾಡುವ ನಿಯಮವನ್ನು ಬದಲಿಸಲು ಇಷ್ಟಪಡುತ್ತೇನೆ ಎಂದಿದ್ದರು.




