
2026 ರ ಐಪಿಎಲ್ ಮಿನಿ ಹರಾಜು ಮುಂಬರುವ ಡಿಸೆಂಬರ್‌ನಲ್ಲಿ ನಡೆಯಲಿದೆ. ಹೀಗಾಗಿ ನವೆಂಬರ್ನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗಿದೆ. ಇದೆಲ್ಲದರ ನಡುವೆ ಐಪಿಎಲ್ ಟ್ರೆಡಿಂಗ್ ವಿಂಡೋ ಈಗಾಗಲೇ ತೆರೆದಿದ್ದು, ಅದರಡಿಯಲ್ಲಿ ಕೆಲವು ಫ್ರಾಂಚೈಸಿಗಳು ಆಟಗಾರರನ್ನು ಟ್ರೆಡಿಂಗ್ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲಾರಂಭಿಸಿವೆ.

ಅದರಂತೆ 2025 ರ ಐಪಿಎಲ್ ಮುಗಿದ ಬಳಿಕ ಹುಟ್ಟಿಕೊಂಡಿದ್ದ ಸಂಜು ಸ್ಯಾಮ್ಸನ್ ರಾಜಸ್ಥಾನ್ ತಂಡವನ್ನು ತೊರೆಯುವ ವದಂತಿಗೆ ಈಗ ವೇಗ ಸಿಕ್ಕಿದೆ. ಈ ಮೊದಲು ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಸಂಜು ಡೆಲ್ಲಿ ತಂಡವನ್ನು ಸೇರುವುದು ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.

ವರದಿಯ ಪ್ರಕಾರ, ಆಟಗಾರರ ವಿನಿಮಯದ ಕುರಿತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮತ್ತು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳ ನಡುವೆ ಈಗಾಗಲೇ ಮಾತುಕತೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಆ ಪ್ರಕಾರ, ರಾಜಸ್ಥಾನ ತಂಡದಲ್ಲಿರುವ ಸಂಜು ಸ್ಯಾಮ್ಸನ್‌ರನ್ನು ಡೆಲ್ಲಿ ತಂಡಕ್ಕೆ ಟ್ರೆಡ್ ಮಾಡುವುದರ ಜೊತೆಗೆ ಡೆಲ್ಲಿ ತಂಡದಲ್ಲಿರುವ ದಕ್ಷಿಣ ಆಫ್ರಿಕಾದ ಆಟಗಾರನನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ರಾಜಸ್ಥಾನ ಮುಂದಾಗಿದೆ ಎಂದು ವರದಿಯಾಗಿದೆ.

ವಾಸ್ತವವಾಗಿ ಕಳೆದ ಆವೃತ್ತಿ ಮುಗಿದ ಬಳಿಕ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯುವ ವದಂತಿಗಳು ಹರಡುತ್ತಿದ್ದು, ಈ ಬಗ್ಗೆ ಸಂಜು ಕೂಡ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದಾರೆ. ಸಂಜು ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಬಹುದು ಎನ್ನಲಾಗುತ್ತಿದ್ದು. ಆದರೆ ಸಂಜು ಡೆಲ್ಲಿ ತಂಡವನ್ನು ಸೇರಬಹುದು ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.

ವರದಿ ನಿಜವಾದರೆ ಒಂಬತ್ತು ವರ್ಷಗಳ ನಂತರ ಸ್ಯಾಮ್ಸನ್ ದೆಹಲಿ ತಂಡಕ್ಕೆ ಮರಳುತ್ತಾರೆ. ಇದಕ್ಕೂ ಮೊದಲು, ಸಂಜು ಸ್ಯಾಮ್ಸನ್ 2016 ಮತ್ತು 2017 ರ ಆವೃತ್ತಿಗಳಲ್ಲಿ ದೆಹಲಿ ಪರ ಆಡಿದ್ದರು. ಅದಕ್ಕೂ ಮೊದಲು ರಾಜಸ್ಥಾನ ತಂಡದ ಪರ ಆಡಿದ್ದ ಸ್ಯಾಮ್ಸನ್ ಮತ್ತೆ 2018 ರಲ್ಲಿ ರಾಯಲ್ಸ್‌ಗೆ ಮರಳಿದ್ದರು. ಈಗ, ಸ್ಯಾಮ್ಸನ್ ಮತ್ತೆ ತಂಡಗಳನ್ನು ಬದಲಾಯಿಸುತ್ತಿರುವಂತೆ ತೋರುತ್ತಿದೆ.

ಕುತೂಹಲಕಾರಿಯಾಗಿ, ಡೆಲ್ಲಿ ತಂಡವು ಸ್ಯಾಮ್ಸನ್ ಬದಲಿಗೆ ತನ್ನ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರನ್ನು ರಾಜಸ್ಥಾನಕ್ಕೆ ವಿನಿಮಯ ಮಾಡಿಕೊಳ್ಳಲು ಸಿದ್ಧವಾಗಿದೆ. ಪ್ರಸ್ತುತ ಡೆಲ್ಲಿ ತಂಡದಲ್ಲಿರುವ ದಕ್ಷಿಣ ಆಫ್ರಿಕಾದ ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಟ್ರಿಸ್ಟಾನ್ ಸ್ಟಬ್ಸ್ ರಾಜಸ್ಥಾನ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಸ್ಟಬ್ಸ್ ಜೊತೆಗೆ ಮತ್ತೊಬ್ಬ ಅನ್‌ಕ್ಯಾಪ್ಡ್ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಯಲ್ಸ್ ಬಯಸಿತ್ತು. ಆದರೆ ಡೆಲ್ಲಿ ಈ ಬೇಡಿಕೆಯನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ. ಇದಲ್ಲದೆ, ಡೆಲ್ಲಿಗೂ ಮುನ್ನ, ರಾಜಸ್ಥಾನ್ ಸ್ಯಾಮ್ಸನ್‌ರನ್ನು ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಟ್ರೆಡ್ ಮಾಡುವ ಬಗ್ಗೆ ಚರ್ಚಿಸಿತ್ತು. ಸ್ಯಾಮ್ಸನ್‌ಗೆ ಬದಲಾಗಿ ರಾಜಸ್ಥಾನ್ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಕೇಳಿತ್ತು. ಆದರೆ ಸಿಎಸ್ಕೆ ಈ ಬೇಡಿಕೆಯನ್ನು ತಿರಸ್ಕರಿಸಿತ್ತು ಎಂದು ವರದಿಯಾಗಿತ್ತು.