
ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಸರ್ಫರಾಝ್ ಖಾನ್ (Sarfaraz Khan) ದೇಶೀಯ ಅಂಗಳದಲ್ಲಿ ತಮ್ಮ ಆರ್ಭಟ ಶುರು ಮಾಡಿದ್ದಾರೆ. ಅದು ಕೂಡ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. ಪ್ರಸ್ತುತ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಮೆಂಟ್‌ನಲ್ಲಿ ಸರ್ಫರಾಝ್ ಸತತ 2 ಶತಕಗಳನ್ನು ಬಾರಿಸಿದ್ದಾರೆ.

ಆಗಸ್ಟ್ 18 ರಂದು ನಡೆದ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದ ಸರ್ಫರಾಝ್ ಖಾನ್ ಕೇವಲ 92 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಅಲ್ಲದೆ ಈ ಪಂದ್ಯದಲ್ಲಿ 114 ಎಸೆತಗಳನ್ನು ಎದುರಿಸಿ 6 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 138 ರನ್ ಬಾರಿಸಿದ್ದರು.

ಇದೀಗ ಹರ್ಯಾಣ ವಿರುದ್ಧದ ಪಂದ್ಯದಲ್ಲೂ ಸರ್ಫರಾಝ್ ಖಾನ್ ಮೂರಂಕಿ ಮೊತ್ತ ಗಳಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಕೇವಲ 84 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.

ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್ ಹರ್ಯಾಣ ಬೌಲರ್ಗಳನ್ನು ಹೈರಾಣರನ್ನಾಗಿಸಿದರು. ಅಲ್ಲದೆ 100 ಎಸೆತಗಳಲ್ಲಿ ಶತಕ ಪೂರೈಸಿದರು. ಇನ್ನು ಈ ಪಂದ್ಯದಲ್ಲಿ 112 ಎಸೆತಗಳನ್ನು ಎದುರಿಸಿದ ಸರ್ಫರಾಝ್ ಖಾನ್ 9 ಫೋರ್ ಹಾಗೂ 5 ಸಿಕ್ಸ್ಗಳೊಂದಿಗೆ 111 ರನ್ಗಳಿಸಿದರು.

ಸದ್ಯ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸುವ ಮೂಲಕ ಸರ್ಫರಾಝ್ ಖಾನ್ ಮತ್ತೆ ಟೀಮ್ ಇಂಡಿಯಾದ ಕದ ತಟ್ಟಿದ್ದಾರೆ. ಅಲ್ಲದೆ ಮುಂಬರುವ ದುಲೀಪ್ ಟ್ರೋಫಿ ಟೂರ್ನಿಯಲ್ಲೂ ಇದೇ ಫಾರ್ಮ್ ಮುಂದುವರೆಸಿ ಭಾರತ ಟೆಸ್ಟ್ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.