16 ಸಿಕ್ಸ್, 18 ಫೋರ್, 210 ರನ್: ಟಿ20 ಲೀಗ್‌ನಲ್ಲಿ ಸಂಜು ಸ್ಯಾಮ್ಸನ್ ತೂಫಾನ್
Kerala Cricket League 2025: ಕೇರಳ ಕ್ರಿಕೆಟ್ ಲೀಗ್ನ 11ನೇ ಪಂದ್ಯದಲ್ಲಿ ತ್ರಿಶೂರ್ ಟೈಟಾನ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಚ್ಚಿ ಬ್ಲೂ ಟೈಗರ್ಸ್ ತಂಡವು 20 ಓವರ್ಗಳಲ್ಲಿ 188 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿ ತ್ರಿಶೂರ್ ಟೈಟಾನ್ಸ್ ತಂಡವು 5 ವಿಕೆಟ್ಗಳ ಜಯ ಸಾಧಿಸಿದೆ.
Updated on: Aug 27, 2025 | 8:00 AM

ಕೇರಳ ಕ್ರಿಕೆಟ್ ಲೀಗ್‌ನಲ್ಲಿ (KCL 2025) ಸಂಜು ಸ್ಯಾಮ್ಸನ್ (Sanju Samson) ಸಿಡಿಲಬ್ಬರ ಮುಂದುವರೆದಿದೆ. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಸ್ಯಾಮ್ಸನ್ ಇದೀಗ ಮತ್ತೊಂದು ಸ್ಫೋಟಕ ಹಾಫ್ ಸೆಂಚುರಿ ಬಾರಿಸಿದ್ದಾರೆ.

ತಿರುವನಂತಪುರದ ಗ್ರೀನ್ ಫೀಲ್ಡ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಹಾಗೂ ತ್ರಿಶೂರ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ ನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೊಚ್ಚಿ ಬ್ಲೂ ಟೈಗರ್ಸ್ ಪರ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭಿಕನಾಗಿ ಕಣಕ್ಕಿಳಿದ ಸ್ಯಾಮ್ಸನ್ 46 ಎಸೆತಗಳಲ್ಲಿ 89 ರನ್ ಸಿಡಿಸಿದರು. ಈ 89 ರನ್ ಗಳಲ್ಲಿ ಸ್ಯಾಮ್ಸನ್ ಬ್ಯಾಟ್ ನಿಂದ 9 ಭರ್ಜರಿ ಸಿಕ್ಸ್ ಹಾಗೂ 4 ಫೋರ್ ಗಳು ಮೂಡಿಬಂದಿದ್ದವು. ಅಂದರೆ ಸಿಕ್ಸ್-ಫೋರ್ ಗಳ ಮೂಲಕವೇ 76 ರನ್ ಕಲೆಹಾಕಿದ್ದರು.

ಇದಕ್ಕೂ ಮುನ್ನ ಕೊಲ್ಲಂ ಸೈಲರ್ಸ್ ವಿರುದ್ಧದ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಆರ್ಭಟಿಸಿದ್ದರು. ಈ ಪಂದ್ಯದಲ್ಲಿ 51 ಎಸೆತಗಳನ್ನು ಎದುರಿಸಿದ್ದ ಸ್ಯಾಮ್ಸನ್ 7 ಭರ್ಜರಿ ಸಿಕ್ಸ್ ಹಾಗೂ 14 ಫೋರ್ ಗಳೊಂದಿಗೆ 121 ರನ್ ಬಾರಿಸಿದ್ದರು. ಇದೀಗ ಮತ್ತೊಮ್ಮೆ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಈ ಮೂಲಕ ಕಳೆದ 2 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ 16 ಸಿಕ್ಸ್ ಹಾಗೂ 18 ಫೋರ್ ಗಳನ್ನು ಬಾರಿಸಿದ್ದಾರೆ. ಅಲ್ಲದೆ ಒಟ್ಟು 210 ರನ್ ಗಳನ್ನು ಕಲೆಹಾಕಿದ್ದಾರೆ. ಇದೇ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿರುವ ಸಂಜು ಸ್ಯಾಮ್ಸನ್ ಕಡೆಯಿಂದ ಏಷ್ಯಾಕಪ್ ನಲ್ಲೂ ಸಿಡಿಲಬ್ಬರ ನಿರೀಕ್ಷಿಸಬಹುದು.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



