Updated on:Feb 16, 2023 | 12:02 PM
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ವಿಂಡೀಸ್ ಟೆಸ್ಟ್ ತಂಡಕ್ಕೆ ಕ್ರೇಗ್ ಬ್ರಾಥ್ವೈಟ್ರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದ ಮಂಡಳಿ ಇದೀಗ ಏಕದಿನ ಮತ್ತು ಟಿ20ಗೆ ಇಬ್ಬರು ನಾಯಕರನ್ನು ಆಯ್ಕೆ ಮಾಡಿದೆ.
ವೆಸ್ಟ್ ಇಂಡೀಸ್ ಶಾಯ್ ಹೋಪ್ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದ್ದು, ಟಿ20 ಮಾದರಿಯಲ್ಲಿ ರೋವ್‌ಮನ್ ಪೊವೆಲ್‌ಗೆ ತಂಡದ ನಾಯಕತ್ವವನ್ನು ನೀಡಲಾಗಿದೆ.
ಈ ಎರಡೂ ಹುದ್ದೆಗಳನ್ನು ಈ ಹಿಂದೆ ನಿಕೋಲಸ್ ಪೂರನ್ ನಿಭಾಯಿಸುತ್ತಿದ್ದರು. ಆದರೆ ಕಳೆದ ವರ್ಷ ಟಿ20 ವಿಶ್ವಕಪ್ ನಂತರ ಪೂರನ್ ಈ ಹುದ್ದೆಗೆ ರಾಜೀನಾಮೆ ನೀಡಿದ್ದರು. ಹೋಪ್ ಮತ್ತು ಪೊವೆಲ್ ಇಬ್ಬರೂ ಪುರನ್ ಅವರ ನಾಯಕತ್ವದಲ್ಲಿ ಉಪನಾಯಕರಾಗಿ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದು, ಇದೀಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೊದಲ ಬಾರಿಗೆ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.
ಶಾಯ್ ಹೋಪ್ ಈ ಹಿಂದೆ ಬಾರ್ಬಡೋಸ್ ತಂಡದ ನಾಯಕತ್ವದ ಅನುಭವ ಹೊಂದಿದ್ದಾರೆ. ಇದಲ್ಲದೆ, ODI ಕ್ರಿಕೆಟ್‌ನಲ್ಲಿ ಅವರ ದಾಖಲೆಯು ಅತ್ಯುತ್ತಮವಾಗಿದ್ದು ಈ ಮಾದರಿಯಲ್ಲಿ ಹೋಪ್ 48.95 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಮತ್ತೊಂದೆಡೆ, ರೋವ್‌ಮನ್ ಪೊವೆಲ್ ಕೂಡ ಟಿ20 ನಾಯಕತ್ವದ ಅಪಾರ ಅನುಭವವನ್ನು ಹೊಂದಿದ್ದು, ಅವರು ಸಿಪಿಎಲ್‌ನಲ್ಲಿ ಜಮೈಕಾ ತಲೈವಾವನ್ನು ಮುನ್ನಡೆಸಿದ್ದಾರೆ. ಅಲ್ಲದೆ ಪೊವೆಲ್ ನಾಯಕತ್ವದಲ್ಲಿ ತಂಡ ಕಳೆದ ವರ್ಷ ಪ್ರಶಸ್ತಿ ಕೂಡ ಗೆದ್ದಿತ್ತು.
ವೆಸ್ಟ್ ಇಂಡೀಸ್‌ನ ದಕ್ಷಿಣ ಆಫ್ರಿಕಾ ಪ್ರವಾಸವು ಫೆಬ್ರವರಿ 28 ರಿಂದ ಪ್ರಾರಂಭವಾಗಲಿದೆ. ಮಾರ್ಚ್ 28 ರವರೆಗೆ ನಡೆಯಲಿರುವ ಈ ಪ್ರವಾಸದಲ್ಲಿ 2 ಟೆಸ್ಟ್, 3 ಏಕದಿನ ಮತ್ತು ಅಷ್ಟೇ ಸಂಖ್ಯೆಯ ಟಿ20 ಪಂದ್ಯಗಳನ್ನು ಆಡಲಾಗುತ್ತದೆ.
ಈ ಮೂರು ಸರಣಿಗಳಲ್ಲಿ 3 ವಿಭಿನ್ನ ನಾಯಕರು ವೆಸ್ಟ್ ಇಂಡೀಸ್ ತಂಡದ ನಾಯಕತ್ವ ವಹಿಸಲಿದ್ದಾರೆ. ಪ್ರವಾಸದಲ್ಲಿ ಮೊದಲು ಟೆಸ್ಟ್ ಸರಣಿ ನಡೆಯಲಿದೆ. ಇದಾದ ಬಳಿಕ ಏಕದಿನ ಹಾಗೂ ಟಿ20 ಸರಣಿ ನಡೆಯಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಪ್ರತಿಯೊಂದು ಮಾದರಿಯಲ್ಲೂ ವಿಭಿನ್ನ ನಾಯಕನ ಪ್ರಯೋಗ ಎಷ್ಟರಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Published On - 12:02 pm, Thu, 16 February 23