
ಐಪಿಎಲ್ 2025ರ 31ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು ಕೇವಲ 95 ರನ್ಗಳಿಗೆ ಕಟ್ಟಿಹಾಕುವ ಮೂಲಕ 16 ರನ್ಗಳಿಂದ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ಗೆ ಇದೀಗ ಐಸಿಸಿ ಮಾರ್ಚ್ ತಿಂಗಳ ಪುರುಷರ ಕ್ರಿಕೆಟಿಗ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪರ ಅಮೋಘ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್ ಅವರ ಆಟವನ್ನು ಗುರುತಿಸಿರುವ ಐಸಿಸಿ, ಇದೀಗ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶ್ರೇಯಸ್, ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 243 ರನ್ ಕಲೆಹಾಕಿದ್ದ ಶ್ರೇಯಸ್ ಈ ಪಂದ್ಯಾವಳಿಯಲ್ಲಿ ಎರಡು ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದ್ದರು. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮ್ಯಾಚ್ ವಿನ್ನಿಂಗ್ಸ್ ಆಡಿದ್ದ ಅಯ್ಯರ್, 2 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 48 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ಐಸಿಸಿಯಿಂದ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆಯಾದ ನಂತರ ಸಂತಸ ವ್ಯಕ್ತಪಡಿಸಿರುವ ಅಯ್ಯರ್, ‘ಮಾರ್ಚ್ ತಿಂಗಳ ಐಸಿಸಿ ಪುರುಷರ ಆಟಗಾರ ಪ್ರಶಸ್ತಿಗೆ ಹೆಸರಿಸಲ್ಪಟ್ಟಿರುವುದು ನನಗೆ ನಿಜಕ್ಕೂ ಗೌರವ ತಂದಿದೆ. ಈ ಮನ್ನಣೆ ಅತ್ಯಂತ ವಿಶೇಷವಾದದ್ದು, ವಿಶೇಷವಾಗಿ ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ತಿಂಗಳಲ್ಲಿ ನನಗೆ ಈ ಪ್ರಶಸ್ತಿ ಸಿಕ್ಕಿರುವುದು ನಾನು ಯಾವಾಗಲೂ ನೆನಪಿಸಿಕೊಳ್ಳುವ ಕ್ಷಣವಾಗಿದೆ.

ಇಷ್ಟು ದೊಡ್ಡ ವೇದಿಕೆಯಲ್ಲಿ ಭಾರತದ ಯಶಸ್ಸಿಗೆ ಕೊಡುಗೆ ನೀಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ನನ್ನ ತಂಡದ ಸದಸ್ಯರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯ ಅಚಲ ಬೆಂಬಲ ಮತ್ತು ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ. ಅಭಿಮಾನಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಶಕ್ತಿ ಮತ್ತು ಪ್ರೋತ್ಸಾಹವು ನಾವು ಪ್ರತಿ ಹೆಜ್ಜೆಯಲ್ಲೂ ಮುಂದುವರಿಯಲು ಸಹಾಯ ಮಾಡುತ್ತದೆ ಎಂದಿದ್ದಾರೆ.