IPL 2025: ಗೆರೆ ದಾಟದಿದ್ದರೂ ನೋ ಬಾಲ್ ಎಂದ ಅಂಪೈರ್: ಕಾರಣವೇನು?
IPL 2025 DC vs RR: ಇಂಡಿಯನ್ ಪ್ರೀಮಿಯರ್ ಲೀಗ್ನ 32ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 188 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ ಕೂಡ 188 ರನ್ ಕಲೆಹಾಕಿತು. ಇದರೊಂದಿಗೆ ಪಂದ್ಯವು ಸೂಪರ್ ಓವರ್ನ ರೋಚಕ ಪೈಪೋಟಿಗೆ ಸಾಗಿತು. ಸೂಪರ್ ಓವರ್ನಲ್ಲಿ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 2 ಅಂಕಗಳನ್ನು ಪಡೆದುಕೊಂಡಿದೆ.
Updated on: Apr 17, 2025 | 8:04 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 32ನೇ ಪಂದ್ಯವು ಹಲವು ಕಾರಣಗಳಿಂದ ಗಮನ ಸೆಳೆದಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ಮೊದಲು ಟೈ ಆಯಿತು. ಆ ಬಳಿಕ ಸೂಪರ್ ಓವರ್ನತ್ತ ಸಾಗಿದ ಪಂದ್ಯದಲ್ಲಿ ನೋ ಬಾಲ್, ಫ್ರೀ ಹಿಟ್ ಹಾಗೂ ರನೌಟ್ಗಳು ಕಂಡು ಬಂದವು. ಅದರಲ್ಲೂ ಮಿಚೆಲ್ ಸ್ಟಾರ್ಕ್ (Mitchell Starc) ಸೂಪರ್ ಓವರ್ನಲ್ಲಿ ಗೆರೆ ದಾಟದಿದ್ದರೂ ಅಂಪೈರ್ ನೋ ಬಾಲ್ ಕೊಟ್ಟಿದ್ದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ.

ಕ್ರಿಕೆಟ್ನಲ್ಲಿ ಲೈನ್ ಣೊಬಾಲ್ಗಳಲ್ಲಿ ಎರಡು ವಿಧವಿದೆ. ಇಲ್ಲಿ ಚೆಂಡೆಸೆಯುವಾಗ ಪಾದವು ಗೆರೆ ದಾಟಿದರೆ ನೋ ಬಾಲ್ ನೀಡುವುದು ಸಾಮಾನ್ಯ. ಇದಾಗ್ಯೂ ಸೈಡ್ ನೋ ಬಾಲ್ ಎಂಬ ನಿಯಮ ಕೂಡ ಇದೆ. ಅಂದರೆ ಚೆಂಡೆಸೆಯುವಾಗ ಬೌಲರ್ನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ (ಸೈಡ್ ಲೈನ್) ಇರಬೇಕು.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೂಪರ್ ಓವರ್ನ 4ನೇ ಎಸೆತಯುವಾಗ ಮಿಚೆಲ್ ಸ್ಟಾರ್ಕ್ ಅವರ ಹಿಂದಿನ ಎಡ ಪಾದವು ರಿಟರ್ನ್ ಕ್ರೀಸ್ಗೆ ತಾಗಿದೆ. ಇಲ್ಲಿ ಹಿಂಪಾದವು ಕ್ರೀಸ್ನ ಹೊರಗೆ ಹೋಗಬೇಕೆಂದಿಲ್ಲ. ಬದಲಾಗಿ ಅದಕ್ಕೆ ತಾಗಿದರೂ ನೋ ಬಾಲ್ ಆಗಿರುತ್ತದೆ. ಅಂದರೆ ಬೌಲರ್ ರಿಟರ್ನ್ ಕ್ರೀಸ್ನ ಒಳಗಿಂದಲೇ ಬೌಲಿಂಗ್ ಮಾಡಬೇಕೆಂಬ ನಿಯಮವಿದೆ.

ಎಂಸಿಸಿ ನಿಯಮ 21.5.1 ರ ಪ್ರಕಾರ, 'ಬೌಲರ್ ಚೆಂಡನ್ನು ಎಸೆಯುವಾಗ ಅವನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ ಇರಬೇಕು. ಅಲ್ಲದೆ ರಿಟರ್ನ್ ಕ್ರೀಸ್ ಅನ್ನು ಮುಟ್ಟಿರಬಾರದು. ಕಾಲು ಗೆರೆಯನ್ನು ತಾಗಿದರೂ ಅದು ನೋ ಬಾಲ್ ಆಗಿರುತ್ತದೆ. ಹೀಗೆ ನೋ ಬಾಲ್ ಆದರೂ ಫ್ರೀ ಹಿಟ್ ಸಿಗುತ್ತದೆ. ಈ ನಿಯಮದ ಅನ್ವಯ ಮಿಚೆಲ್ ಸ್ಟಾರ್ಕ್ ಅವರ ಕಾಲು ರಿಟರ್ನ್ ಕ್ರೀಸ್ಗೆ ತಾಗುತ್ತಿದ್ದಂತೆ ಥರ್ಡ್ ಅಂಪೈರ್ ನೋಬಾಲ್ ನೀಡಿದ್ದಾರೆ.

ಇನ್ನು ಈ ಪಂದ್ಯದ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜನ್ಥಾನ್ ರಾಯಲ್ಸ್ ತಂಡವು 5 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಎಸೆತಗಳಲ್ಲಿ 1 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 13 ರನ್ ಬಾರಿಸಿ ರೋಚಕ ಗೆಲುವು ದಾಖಲಿಸಿತು.



















