
ಭಾರತ ಏಕದಿನ ತಂಡದ ಉಪ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಈಗ ಹೇಗಿದ್ದಾರೆ? ಈ ಪ್ರಶ್ನೆಗೆ ಕೊನೆಗೂ ಅಯ್ಯರ್ ಕಡೆಯಿಂದಲೇ ಉತ್ತರ ಸಿಕ್ಕಿದೆ. ಅದು ಸಹ ನಗು ಮುಖದೊಂದಿಗೆ ಎಂಬುದು ಸಂತಸದ ಸುದ್ದಿ. ಅಕ್ಟೋಬರ್ 25 ರಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಗಂಭೀರವಾಗಿ ಗಾಯಗೊಂಡಿದ್ದರು.

ಸಿಡ್ನಿಯಲ್ಲಿ ನಡೆದ ಈ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ಭರ್ಜರಿ ಹೊಡೆತ ಬಾರಿಸಿದ್ದರು. ಈ ವೇಳೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಹೋಗಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು. ಈ ಡೈವಿಂಗ್ ವೇಳೆ ಅವರ ಎಡ ಪಕ್ಕೆಲುಬುಗಳಿಗೆ ಗಂಭೀರ ಪೆಟ್ಟಾಗಿತ್ತು.

ಇದರಿಂದ ಅವರ ಪೆಕ್ಕೆಲುಬಿನ ಮೇಲ್ಭಾಗದ ಅಂಗದಲ್ಲಿ (ಗುಲ್ಮ) ಆಂತರಿಕ ರಕ್ತಸ್ರಾವವಾಗಿತ್ತು. ಸ್ಕ್ಯಾನಿಂಗ್ ರಿಪೋರ್ಟ್ನಲ್ಲಿ ಶ್ರೇಯಸ್ ಅಯ್ಯರ್ ಅವರ ಗುಲ್ಮದ ಭಾಗವು ಛಿದ್ರವಾಗಿರುವುದು ಕಂಡು ಬಂದಿದೆ. ಹೀಗಾಗಿ ಅವರನ್ನು ಇಂಟರ್ವೆನ್ಷನಲ್ ಟ್ರಾನ್ಸ್-ಕ್ಯಾತಿಟರ್ ಎಂಬೋಲೈಸೇಶನ್ ಚಿಕಿತ್ಸೆಗೆ ಒಳಪಡಿಸಲಾಗಿತ್ತು.

ಇದೀಗ ಚೇತರಿಸಿಕೊಂಡಿರುವ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದಾಗ್ಯೂ ವೈದ್ಯಕೀಯ ಮೇಲ್ವಿಚಾರಣೆಗಾಗಿ ಅವರು ಸಿಡ್ನಿಯಲ್ಲೇ ಉಳಿದಿದ್ದಾರೆ. ಸದ್ಯ ಸಿಡ್ನಿಯಲ್ಲಿರುವ ಅಯ್ಯರ್ ತಮ್ಮ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಆರೋಗ್ಯದ ಮಾಹಿತಿ ನೀಡಿದ್ದಾರೆ.

ಸಿಡ್ನಿ ಬೀಚ್ನಲ್ಲಿ ಕೂತಿರುವ ಫೋಟೋ ಹಂಚಿಕೊಂಡಿರುವ ಶ್ರೇಯಸ್ ಅಯ್ಯರ್... "ಸೂರ್ಯನಿಂದ ಉತ್ತಮ ಥೆರಪಿ ಸಿಕ್ಕಿದೆ. ಮತ್ತೆ ಬಂದಿರುವುದ್ದಕ್ಕೆ ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು" ಎಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ. ಇದರೊಂದಿಗೆ ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಆಗಿರುವುದು ಖಚಿತವಾಗಿದೆ. ಅಲ್ಲದೆ ಶ್ರೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.
Published On - 7:54 am, Tue, 11 November 25