ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ ಏಕೈಕ ಪಂದ್ಯವನ್ನಾಡಿ ಇದೀಗ ಸೂಪರ್ 4 ಹಂತಕ್ಕೆ ಎಂಟ್ರಿಕೊಟ್ಟಿದೆ. ಲೀಗ್ ಹಂತದಲ್ಲಿ ನಡೆದ ಏಕೈಕ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆದ್ದು ಬೀಗಿದ ಭಾರತಕ್ಕೆ ಮುಂದಿನ ಎದುರಾಳಿಯಾಗಿ ಪಾಕಿಸ್ತಾನ ಮತ್ತೊಮ್ಮ ಎದುರಾಗುತ್ತಿದೆ.
ಇನ್ನು ನೇಪಾಳ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಜೊತೆಗೆ 147 ರನ್ಗಳ ಅಜೇಯ ಜೊತೆಯಾಟವನ್ನಾಡಿದ ಯುವ ಆರಂಭಿಕ ಗಿಲ್, ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 62 ಎಸೆತಗಳಲ್ಲಿ 67 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಏಷ್ಯಾಕಪ್ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದ ಗಿಲ್ ಅತ್ಯಂತ ಕಡಿಮೆ ಏಕದಿನ ಪಂದ್ಯಗಳಲ್ಲಿ 1500 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಇತಿಹಾಸವನ್ನು ಸೃಷ್ಟಿಸಿದ್ದಾರೆ. 63.08 ಸರಾಸರಿಯಲ್ಲಿ ಏಕದಿನ ರನ್ ಕಲೆಹಾಕಿರುವ ಗಿಲ್ ಅವರ ಹೆಸರಿನಲ್ಲಿ ಒಂದು ದ್ವಿಶತಕ, ಮೂರು ಶತಕ ಮತ್ತು ಏಳು ಅರ್ಧಶತಕಗಳು ಸೇರಿವೆ.
ವಾಸ್ತವವಾಗಿ ನೇಪಾಳದ ವಿರುದ್ಧದ ಪಂದ್ಯವು 50-ಓವರ್‌ಗಳ ಸ್ವರೂಪದಲ್ಲಿ ಗಿಲ್ ಅವರ 29 ನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ 67 ರನ್ಗಳ ಇನ್ನಿಂಗ್ಸ್ ಮೂಲಕ 1514 ಏಕದಿನ ರನ್ ಪೂರೈಸಿದ ಗಿಲ್ ಅತಿ ವೇಗವಾಗಿ ಈ ಮೈಲಿಗಲ್ಲನ್ನು ಸಾಧಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇನ್ನು ಈ ದಾಖಲೆಯ ಮೂಲಕ ಗಿಲ್ ದಕ್ಷಿಣ ಆಫ್ರಿಕಾದ ದಂತಕಥೆ ಆರಂಭಿಕ ಬ್ಯಾಟರ್ ಹಶೀಮ್ ಆಮ್ಲಾ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಹಶೀಮ್ ಆಮ್ಲಾ 30 ಇನ್ನಿಂಗ್ಸ್‌ಗಳಲ್ಲಿ 1500 ಏಕದಿನ ರನ್ ಕಲೆಹಾಕಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ಆ ದಾಖಲೆ ಗಿಲ್ ಪಾಲಾಗಿದೆ
ಆಮ್ಲಾ ಹೊರತಾಗಿ ನೆದರ್ಲ್ಯಾಂಡ್ಸ್ ರಯಾನ್ ಟೆನ್ ಡೋಸ್ಕೇಟ್ ಮತ್ತು ಮಾಜಿ ಆಸ್ಟ್ರೇಲಿಯನ್ ನಾಯಕ ಜಾರ್ಜ್ ಬೈಲಿ ಅವರು 32 ಏಕದಿನ ಇನ್ನಿಂಗ್ಸ್‌ಗಳಲ್ಲಿ 1500 ರನ್ಗಳ ಗಡಿ ಮುಟ್ಟಿ ದಾಖಲೆ ಬರೆದಿದ್ದರು. ಈ ಮೂವರ ನಂತರ ವಿಶ್ವದ ನಂ.1 ಏಕದಿನ ಬ್ಯಾಟರ್ ಎನಿಸಿಕೊಂಡಿರುವ ಬಾಬರ್ ಆಝಂ ಕೂಡ 32 ಏಕದಿನ ಪಂದ್ಯಗಳಲ್ಲಿ 1500 ರನ್ ಪೂರೈಸಿದ್ದಾರೆ.
ಭಾರತೀಯರ ವಿಚಾರಕ್ಕೆ ಬರುವುದಾದರೆ ಗಿಲ್‌ಗಿಂತ ಮೊದಲು, ಭಾರತದ ಪರ ಅತಿವೇಗದ 1500 ಏಕದಿನ ರನ್‌ಗಳನ್ನು ಗಳಿಸಿದ ದಾಖಲೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ಹೆಸರಿನಲ್ಲಿತ್ತು.
ಡಿಸೆಂಬರ್ 10, 2017 ರಂದು ಧರ್ಮಶಾಲಾದಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಪರ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ 28 ವರ್ಷದ ಅಯ್ಯರ್, 1500 ಏಕದಿನ ರನ್ ಪೂರೈಸಲು 34 ಇನ್ನಿಂಗ್ಸ್ಗಳನ್ನು ತೆಗೆದುಕೊಂಡಿದ್ದರು.
Published On - 12:55 pm, Wed, 6 September 23