
ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಂತೆಯೇ, ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯೂ ಕೂಡ ಸೋಲಿನೊಂದಿಗೆ ಪ್ರಾರಂಭವಾಗಿದೆ. ಈ ಮೂಲಕ ಶುಭ್ಮನ್ ಗಿಲ್ ಟೆಸ್ಟ್ ಮತ್ತು ಏಕದಿನ ಮಾದರಿಗಳೆರಡರಲ್ಲೂ ಪೂರ್ಣ ಪ್ರಮಾಣದ ನಾಯಕರಾಗಿ ತಮ್ಮ ಮೊದಲ ಪಂದ್ಯದಲ್ಲೇ ಸೋಲನ್ನು ಎದುರಿಸಿ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

ನಾಯಕನಾಗಿ ಮೊದಲ ಏಕದಿನ ಪಂದ್ಯವನ್ನು ಸೋತಿರುವ ಶುಭ್ಮನ್ ಗಿಲ್ ಮುಜುಗರದ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಅದೆನೆಂದರೆ, ಮೂರು ಸ್ವರೂಪಗಳಲ್ಲಿ ನಾಯಕತ್ವ ವಹಿಸಿಕೊಂಡು ಮೊದಲ ಪಂದ್ಯವನ್ನು ಸೋತ ಮೊದಲ ಭಾರತೀಯ ನಾಯಕ ಎಂಬ ಬೇಡದ ದಾಖಲೆಗೆ ಗಿಲ್ ಕೊರಳೊಡ್ಡಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ ವಿರಾಟ್ ಕೊಹ್ಲಿ ಕೂಡ ನಾಯಕನಾಗಿ ಇದೇ ರೀತಿಯ ಆರಂಭವನ್ನು ಪಡೆದುಕೊಂಡಿದ್ದರು. ಮತ್ತೊಂದು ಸಂಗತಿಯೆಂದರೆ ವಿರಾಟ್ ಕೊಹ್ಲಿ ಹಾಗೂ ಶುಭ್ಮನ್ ಗಿಲ್ ಇಬ್ಬರೂ ಸಹ ನಾಯಕತ್ವ ವಹಿಸಿಕೊಂಡ ತಮ್ಮ ಮೊದಲ ಐಪಿಎಲ್ ಪಂದ್ಯವನ್ನು ಸಹ ಸೋತಿದ್ದರು. ಆದರೆ ದೇಶೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ತಮ್ಮ ಮೊದಲ ಪಂದ್ಯವನ್ನು ಸೋತ ಕಾರಣ ಶುಭ್ಮನ್ ಗಿಲ್, ನಾಯಕನಾಗಿ ಮೊದಲ ಪಂದ್ಯ ಸೋತ ವಿಚಾರದಲ್ಲಿ ಕೊಹ್ಲಿಯನ್ನು ಮೀರಿಸಿದ್ದಾರೆ.

ವಾಸ್ತವವಾಗಿ, ಶುಭ್ಮನ್ ಗಿಲ್ ಜಿಂಬಾಬ್ವೆ ವಿರುದ್ಧ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿದ್ದರು. ಜುಲೈ 6, 2024 ರಂದು ಗಿಲ್ ನಾಯಕತ್ವದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋತಿತ್ತು. ಇದೀಗ ಈ ವರ್ಷ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕತ್ವವಹಿಸಿಕೊಂಡಿರುವ ಗಿಲ್, ಎರಡೂ ಮಾದರಿಯಲ್ಲು ಸೋಲಿನ ಆರಂಭ ಕಂಡಿದ್ದಾರೆ.

2025 ರ ಜೂನ್ 20 ರಂದು ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಮೊದಲ ಬಾರಿಗೆ ತಂಡದ ನಾಯಕತ್ವವಹಿಸಿಕೊಂಡಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಇದೀಗ ಆಸೀಸ್ ಪ್ರವಾಸದಲ್ಲಿ ಏಕದಿನ ತಂಡದ ನಾಯಕತ್ವವಹಿಸಿಕೊಂಡಿರುವ ಗಿಲ್ ತಮ್ಮ ಮೊದಲ ಪಂದ್ಯವನ್ನು ಸೋತಿದ್ದಾರೆ. ಇದಲ್ಲದೆ ಐಪಿಎಲ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲೂ ಸಹ ಗಿಲ್, ಪಂಜಾಬ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಸೋಲಿಗೆ ಕೊರಳೊಡ್ಡಿದ್ದರು.

ಗಿಲ್ಗೂ ಮೊದಲು ವಿರಾಟ್ ಕೊಹ್ಲಿ ಈ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಆದರೆ ಅವರು ಎಂದಿಗೂ ತಮ್ಮ ರಾಜ್ಯ ತಂಡದ ನಾಯಕತ್ವವನ್ನು ವಹಿಸಿಕೊಂಡಿಲ್ಲ. ಪರಿಣಾಮವಾಗಿ, ಶುಭ್ಮನ್ ಗಿಲ್ ಅಂತರರಾಷ್ಟ್ರೀಯ ಕ್ರಿಕೆಟ್, ಐಪಿಎಲ್ ಮತ್ತು ವೃತ್ತಿಪರ ದೇಶೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ನಾಯಕತ್ವ ವಹಿಸಿಕೊಂಡು ತನ್ನ ಮೊದಲ ಪಂದ್ಯವನ್ನು ಸೋತ ಏಕೈಕ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ.
Published On - 6:57 pm, Sun, 19 October 25